ಒಟ್ಟೋವಾ: ಖಲಿಸ್ತಾನಿ ಬೆಂಬಲಿಗರು ಇಂದಿರಾ ಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ಸ್ತಬ್ಧಚಿತ್ರವನ್ನು ಮೆರವಣಿಗೆ ಮಾಡಿರುವ ಘಟನೆ ಕೆನಡಾದಲ್ಲಿ ನಡೆದಿದ್ದು ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆನಡಾದ ಬ್ರಾಂಪ್ಟನ್ ನಗರದಲ್ಲಿ ವಿವಾದಿತ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಗಿದೆ. 1984 ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿಗಳೇ ಹತ್ಯೆ ಮಾಡಿದ್ದರು. ಆ ಸಂದರ್ಭವನ್ನು ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿತ್ತು.
ಜೂ. 6 ರಂದು ‘ಆಪರೇಷನ್ ಬ್ಲೂ ಸ್ಟಾರ್’ ಆಚರಣೆಗೂ ಮೊದಲು ಜೂ.4 ರಂದು ಖಲಿಸ್ತಾನಿ ಬೆಂಬಲಿಗರು ಪರೇಡ್ ಆಯೋಜಿಸಿದ್ದರು. ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಕೊಲೆಗಾರರು ಹತ್ಯೆ ಮಾಡುತ್ತಿರುವ ಸಂದರ್ಭದ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಕೊಲೆ ಮಾಡಿದವರು ಪ್ರಧಾನಿ ಭದ್ರತಾ ಸಿಬ್ಬಂದಿಯೇ ಆಗಿದ್ದರು. ಆ ಸ್ತಬ್ಧಚಿತ್ರದಲ್ಲಿ “ಶ್ರೀ ದರ್ಬಾರ್ ಸಾಹಿಬ್ ಮೇಲಿನ ದಾಳಿಗೆ ಪ್ರತೀಕಾರ” ಎಂದು ಹೇಳುವ ಫಲಕ ಅಳವಡಿಸಲಾಗಿದೆ.
ಸ್ತಬ್ಧಚಿತ್ರ ಮೆರವಣಿಗೆಗೆ ಕೆನಡಾ ಹೈಕಮಿಷನರ್ ಖಂಡನೆ ವ್ಯಕ್ತಪಡಿಸಿದೆ. ಕೆನಡಾದ ಬ್ರಾಂಪ್ಟನ್ ನಗರದಲ್ಲಿ ದಿವಂಗತ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಸಂಭ್ರಮಾಚರಣೆಯ ವರದಿಗಳನ್ನು ಭಾರತದಲ್ಲಿ ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮ್ಯಾಕೆ ಖಂಡಿಸಿದ್ದಾರೆ. “ಕೆನಡಾದಲ್ಲಿ ದ್ವೇಷ ಅಥವಾ ಹಿಂಸಾಚಾರವನ್ನು ವೈಭವೀಕರಿಸುವುದಕ್ಕೆ ಅವಕಾಶ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.