ಲಾಹೋರ್ : 20 ವರ್ಷದ ಯುವತಿಯನ್ನು ಕುಟುಂಬದ ಗೌರವದ ಹೆಸರಿನಲ್ಲಿ ಸಜೀವ ದಹನ ಮಾಡಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಲಾಹೋರ್ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯ ಗರ್ ಮಹಾರಾಜದಲ್ಲಿ ಘಟನೆ ನಡೆದಿದೆ. ರಜಬ್ ಅಲಿ ಎಂಬಾತ ತನ್ನ ಮಕ್ಕಳಾದ ಜಬ್ಬಾರ್, ಅಮೀರ್ ಮತ್ತು ಇತರ ಕೆಲವು ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು ತಮ್ಮ ಮಗಳನ್ನು ಸುಟ್ಟು ಹಾಕಿದ್ದಾನೆ. ಕೊಲೆಗೂ ಮುನ್ನ ಆಕೆಗೆ ಚಿತ್ರಹಿಂಸೆ ನೀಡಲಾಗಿತ್ತು ಎಂದು ತನಿಖಾಧಿಕಾರಿ ಮುಹಮ್ಮದ್ ಅಜಮ್ ಪಾಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಯುವತಿ ತಾನು ಪ್ರೀತಿಸುತ್ತಿದ್ದ ಪುರುಷನನ್ನು ಮದುವೆಯಾಗಲು ಬಯಸಿದ್ದಳು. ಸಜೀವ ದಹನಕ್ಕೆ ಒಂದು ದಿನ ಹಿಂದೆ ಆಕೆ ತನ್ನ ಪ್ರಿಯಕರನ ಭೇಟಿಗಾಗಿ ಮನೆಯಿಂದ ಹೊರ ಹೋಗಿದ್ದಳು. ಅಲ್ಲದೇ ಅಲ್ಲಿ ಅವಳು ಆತನೊಂದಿಗೆ ಸ್ವಲ್ಪ ಸಮಯ ಕಳೆದಿದ್ದಳು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಕುಟುಂಬಕ್ಕೆ ಅಗೌರವ ತಂದಿದ್ದಾಳೆ ಎಂದು ಕುಟುಂಬದ ಸದಸ್ಯರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ತದನಂತರ ಸಂತ್ರಸ್ತೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಅದಾಗಲೇ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ. ಸಾವಿಗೂ ಮುನ್ನ ಆಕೆ ತನಗೆ ಬೆಂಕಿ ಹಚ್ಚಿದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಬಂಧಿಸಲಾಗಿದೆ. ಬಂಧಿತರು ತಮ್ಮ ದುಷ್ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ಪಡುತ್ತಿಲ್ಲ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.