ಸಿನಿಮಾ ಸೆಟ್ಗಳಲ್ಲಿ ಅವಘಡಗಳು ನಡೆಯೋದು ಸಾಮಾನ್ಯವಾಗಿದೆ. ಅದರಲ್ಲೂ ಕೆಲವೊಮ್ಮೆ ಜೀವನಗಳು ಹೋಗುತ್ತವೆ. ಆದರೆ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದ್ದಾಗ ಅದಕ್ಕೆ ಪರಿಹಾರವಾಗಿ ಕೋರ್ಟ್ ಮೆಟ್ಟಿಲೇರೋದು ತೀರಾ ವಿರಳ. ಆದರೆ ಮಲಯಾಳಂ ನಟಿಯೊಬ್ಬರು ಶೂಟಿಂಗ್ ಸೆಟ್ನಲ್ಲಿ ಗಾಯವಾಗಿದ್ದಕ್ಕೆ ಪ್ರತಿಯಾಗಿ ತಮಗೆ ಐದು ಕೋಟಿ ರೂಪಾಯಿ ಹಣವನ್ನು ಪರಿಹಾರವನ್ನಾಗಿ ಕೊಡಬೇಕೆಂದು ಪ್ರಕರಣ ದಾಖಲಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮಲಯಾಳಂ ನಟಿ ಶೀಥಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು ವಾರಿಯವರ್ ವಿರುದ್ಧ ದೂರು ದಾಖಲಿಸಿದ್ದು, ತಮ್ಮ ಗಾಯಕ್ಕೆ ಪರಿಹಾರವಾಗಿ ಐದು ಕೋಟಿ ರೂಪಾಯಿಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶೀಥಲ್ ತಂಬಿ, ‘ಫುಟೇಜ್’ ಹೆಸರಿನ ಮಲಯಾಳಂ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾದ ಆಕ್ಷನ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಅವಘಡದಲ್ಲಿ ಶೀಥಲ್ಗೆ ಗಾಯವಾಗಿದೆ. ಚಿತ್ರೀಕರಣದ ಸಮಯದಲ್ಲಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲದ ಕಾರಣವೇ ತಮಗೆ ಗಾಯವಾಗಿದೆ ಎಂದಿರುವ ಶೀಥಲ್, ಗಾಯಗೊಂಡ ದಿನ ತಮಗೆ ಆಂಬುಲೆನ್ಸ್ ಸೇವೆ ಸಹ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.
ಗಾಯಗಿಂದ ತಮ್ಮ ವೃತ್ತಿ ಜೀವನಕ್ಕೆ ಸಮಸ್ಯೆ ಆಗಿದ್ದು, ಇನ್ನು ಮುಂದೆ ನಟಿಸಲು ನನಗೆ ಸಾಧ್ಯ ಆಗದೇ ಹೋಗಬಹುದು ಹಾಗಾಗಿ ಪರಿಹಾರವಾಗಿ ನನಗೆ ಐದು ಕೋಟಿ ರೂಪಾಯಿ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಟಿ ಮಂಜು ವಾರಿಯರ್, ‘ಫುಟೇಜ್’ ಸಿನಿಮಾದ ಸಹ ನಿರ್ಮಾಪಕಿ ಆಗಿರುವ ಕಾರಣ, ದೂರಿನಲ್ಲಿ ಅವರ ಹೆಸರನ್ನೂ ಸಹ ಉಲ್ಲೇಖಿಸಲಾಗಿದ್ದು, ತಮಗೆ ಐದು ಕೋಟಿ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.