ವಿಜಯಪುರ: ದ್ವಿಚಕ್ರ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ವಿಜಯಪುರ ನಗರದ ಬಸವನ ನಗರದ ಬಳಿ ನಡೆದಿದೆ. ಜೊತೆಗೆ ಅಪಘಾತದ ಬಳಿಕ ಎರಡುವರೆ ಕಿಲೋಮೀಟರ್ ಬೈಕ್ ಸವಾರನನ್ನು ಕಾರ್ ಚಾಲಕ ಎಳೆದೊಯ್ದಿದ್ದಾನೆ.
ಮೃತಪಟ್ಟ ಸವಾರನನ್ನು 37 ವರ್ಷದ ವಕೀಲ ರವಿ ಮೇಲಿನಮನಿ ಎಂದು ತಿಳಿದುಬಂದಿದೆ.
ಭೀಮಾತೀರದ ಹಂತಕರ ಕುಖ್ಯಾತಿಯ ಬಾಗಪ್ಪ ಹರಿಜನ ಸಂಬಂಧಿಕನಾಗಿದ್ದ ರವಿ, ನ್ಯಾಯವಾದಿಯಾಗಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದ.
ಇನ್ನು ಅಪಘಾತದ ಬಳಿಕ ಇನ್ನೋವಾ ಅಡಿಯಲ್ಲಿ ಸಿಲುಕಿದ್ದ ರವಿ ಶವ ಬೇರ್ಪಟ್ಟ ಬಳಿಕ ಚಾಲಕ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯವಸ್ಥಿತಿವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತನಿಖೆ ಬಳಿಕ ಘಟನೆ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಎಸ್ಪಿ ಋಷಿಕೇಶ ಸೋನೆವಣೆ ತಿಳಿಸಿದ್ದಾರೆ.