ಬೆಂಗಳೂರ: 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 29, 2024ರಂದು ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳು, ಗೌರವಾನ್ವಿತ ಅತಿಥಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ.
ಸಿಂಹಾಸನ, ಸಾಮ್ಮಾ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮುಂತಾದ ಚಿತ್ರಗಳ ಖ್ಯಾತಿಯ ಡಾ.ಜಬ್ಬಾರ್ ಪಟೇಲ್, ಖ್ಯಾತ ನಟರಾದ ಶಿವರಾಜ್ ಕುಮಾರ್, ಇತ್ತೀಚೆಗೆ ವಿಶಾಲ್ ಭಾರದ್ವಾಜ್ ನಿರ್ದೇಶನದ “ಖುಫಿಯಾ” ಚಿತ್ರದಲ್ಲಿ ನಟಿಸಿದ ಬಾಂಗ್ಲಾದೇಶದ ಖ್ಯಾತ ನಟಿ ಅಜಮೇರಿ ಬಂದೋನ್, ಜೆಕ್ ರಿಪಬ್ಲಿಕ್ನ ಚಲನಚಿತ್ರ ಶಿಕ್ಷಣ ತಜ್ಞೆ, ವಿಮರ್ಶಕಿ ವಿಯರಾ ಲ್ಯಾಂಗರೋವಾ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳಲಿದ್ದಾರೆ.
ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರಿಂದ ಉದ್ಘಾಟನೆಗೆ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನಾ ಚಿತ್ರವಾಗಿ ಸ್ವಿಸ್ ಚಲನಚಿತ್ರ, ಪೀಟರ್ ಲೂಸಿ ನಿರ್ದೇಶನದ, 88 ನಿಮಿಷಗಳ ಅವಧಿಯ ‘ಬೋಂಜೂರ್ ಸ್ವಿಟ್ಸರ್ಲೆಂಡ್’ ಪ್ರದರ್ಶನವಾಗಲಿದೆ.
ಕನ್ನಡ ಭಾರತೀಯ ಮತ್ತು ಏಷ್ಯನ್ ಸಿನಿಮಾಗಳಲ್ಲಿ ಸ್ಪರ್ಧಾತ್ಮಕ ವಿಭಾಗಗಳು, ಸಮಕಾಲೀನ ವಿಶ್ವ ಸಿನೆಮಾ, ದೇಶಕೇಂದ್ರಿ, ವಿಮರ್ಶಕರ ವಾರ, ಪುನರ್ವಲೋಕನ, ವಿಷಯಾಧಾರಿತ ಸಾಕ್ಷ್ಯಚಿತ್ರ ವಿಭಾಗ, ಜೀವನಚರಿತ್ರೆ, ಸ್ಮರಣೆ, ಗೌರವ, ಮಹಿಳಾ ಶಕ್ತಿ, ಹೀಗೆ ವಿವಿಧ ವಿಭಾಗಗಳಲ್ಲಿ 50 ಕ್ಕೂ ಹೆಚ್ಚು ದೇಶಗಳ. 180 ಚಲನಚಿತ್ರಗಳು ಈ ಉತ್ಸವದಲ್ಲಿ ಪ್ರದರ್ಶನವಾಗಲಿವೆ.