ಹುಬ್ಬಳ್ಳಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿಯಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ರಾಜಸ್ಥಾನ ಮೂಲದ ಅಂತರರಾಜ್ಯ ಗಾಂಜಾ ಮಾರಾಟಗಾರನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ರಾಜಸ್ಥಾನ ಮೂಲದ ವ್ಯಕ್ತಿಯೋರ್ವ ನಗರದ ರೈಲ್ವೆ ನಿಲ್ದಾಣ ಬಳಿಯಿರುವ ಬೋಗಿ ಬೋಗಿ ಹೊಟೇಲ ಬಳಿ ಮಾರಾಟ ಮಾಡಲು ಬರುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಎಸಿಪಿ ದಕ್ಷಿಣರವರ ನೇತೃತ್ವದಲ್ಲಿ ಶಹರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಮ್.ಎಮ್. ತಹಶಿಲ್ದಾರ, ಪಿಎಸ್ಐ ಮಾರುತಿ ಅವರನ್ನು ಒಳಗೊಂಡ ತಂಡ ಮಾಹಿತಿ ಬಂದ ಸ್ಥಳದ ಮೇಲೆ ದಾಳಿ ಮಾಡಿ ಬಂಧನ ಮಾಡಿದ್ದಾರೆ.
ರಾಜಸ್ಥಾನ ಮೂಲದ ಓಂಪ್ರಕಾಶ್ ವೀರಮಾರಾಮ ಬಾರಮೇರ ಎಂಬಾತನನ್ನು ಬಂಧನ ಮಾಡಿ ಆತನಿಂದ 85,000 ರೂ. ಮೌಲ್ಯದ 888 ಗ್ರಾಂ ಗಾಂಜಾ, 9 ಲಕ್ಷ ರೂ. ಮೌಲ್ಯದ ಒಂದು ಕೀಯಾ ಸೋನೆಟ್ ಕಾರು, 50,000 ರೂ. ಮೌಲ್ಯದ ಒಂದು ಐಫೋನ್, ವಿವಿಧ ಬ್ಯಾಂಕಿನ 30 ಎಟಿಎಂ ಕಾರ ವಿವಿಧ ಬ್ಯಾಂಕಿನ 36 ಚೆಕ್ ಬುಕ್, 4 ಪಾಸ್ ಬುಕ್, 9 ಪಾನ್ ಕಾರ್ಡ್, 7 ವಿವಿಧ ರಬ್ಬರ್ ಸ್ಟಾಂಪ್, 6 ಸ್ಟಾಪಿಂಗ್ ಮಷೀನ್ ಗಳನ್ನು ಹಾಗೂ 96,50,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಬಂಧಿತನಿಂದ 1,06,85,000 ರೂ. ಮೌಲ್ಯದ ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜಸ್ಥಾನದಲ್ಲಿ ನಕಲಿ ಆಧಾರ ಕಾರ್ಡ್ ಮಾಡಿಸಿಕೊಂಡಿದ್ದ, ಈ ಮೊದಲು ಗೋವಾದಲ್ಲಿ ಗಾಂಜಾ ದಂಧೆಗೆ ಇಳಿಯಲು ಮೂರು ತಿಂಗಳು ಕಾಲ ತರಬೇತಿ ಪಡೆದಿದ್ದ ಎಂದು ತಿಳಿದು ಬಂದಿದೆ. ಕೇಶ್ವಾಪೂರ ವ್ಯಾಪ್ತಿಯಲ್ಲಿ ಆತ ವಾಸವಾಗಿದ್ದ, ಯಾವುದೇ ಕೆಲಸದಲ್ಲಿ ತೊಡಗಿಲ್ಲ ಈತನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಮಾಡಲಾಗುವುದು ಎಂದರು.
ಇನ್ನು ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಅವಳಿನಗರದಲ್ಲಿ ಅಧಿಕಾರವಹಿಸಕೊಂಡ ಮೇಲೆ ೧೨ ಕ್ಕೂ ಹೆಚ್ಚು ಪ್ರಮುಖ ಪ್ರಕರಣ ದಾಖಲಿಸಿ ೬೧ ಗಾಂಜಾ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ೩೧೫ ಕ್ಕೂ ಹೆಚ್ಚು ಗಾಂಜಾ ಸೇವಕರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಇನ್ನೂ ಹುಬ್ಬಳ್ಳಿ-ಧಾರವಾಡ ಅವಳಿನಗರವನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿದೆ ಎಂದರು.