ಬೆಂಗಳೂರು ;- ಕುಮಾರಸ್ವಾಮಿಯವರ ವಿದೇಶ ಪ್ರವಾಸದ ಬೆನ್ನಲ್ಲೇ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ತಮ್ಮ ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸ ಕೈಗೊಂಡಿದ್ದು, ಈ ಬೆಳವಣಿಗೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಗೆ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಪುಷ್ಟಿ ನೀಡುತ್ತಿದೆಯೇ ಎಂಬ ಅಂತೆ ಕಂತೆಗಳು ಸಹ ಹರಿದಾಡುತ್ತಿವೆ.
ಎಚ್.ಡಿ. ಕುಮಾರಸ್ವಾಮಿಯವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದು, ಇದಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರವನ್ನು ಪತನಗೊಳಿಸಲು ವಿದೇಶದಲ್ಲಿ ಸಂಚು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು.
ಇದು ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವನ್ನು ಸೃಷ್ಟಿಸಿದ್ದು, ಆದರೆ ಜೆಡಿಎಸ್ ನಾಯಕರು ಈ ಆರೋಪವನ್ನು ತಳ್ಳಿ ಹಾಕಿದ್ದರು. ಆದರೆ ಇದಕ್ಕೆ ಪುಷ್ಟಿ ನೀಡುವಂತೆ HDK ಪ್ರವಾಸ ಬೆನ್ನಲ್ಲೇ ಯಡಿಯೂರಪ್ಪ ಪ್ರವಾಸ ಕೈಗೊಂಡಿರುವುದು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.