ವಿಷ್ಣು ಮಂಚು ನಟನೆಯ ಕಣ್ಣಪ್ಪ ಸಿನಿಮಾ ಪಾತ್ರವರ್ಗಗಳ ವಿಚಾರಕ್ಕೆ ಸಖತ್ ಸದ್ದು ಮಾಡುತ್ತಿದೆ. ಈಗಾಗಲೇ ಸಾಕಷ್ಟು ಕಲಾವಿಧರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಕಣ್ಣಪ್ಪ ಸಿನಿಮಾದ ಶೂಟಿಂಗ್ ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮುಂದುವರಿಸಿದೆ. ಈಗಾಗಲೇ ಬಿಡುಗಡೆ ಆಗಿರುವ ಕಣ್ಣಪ್ಪ ಸಿನಿಆದ ಟೀಸರ್ ಕೂಡ ಪ್ರೇಕ್ಷಕರನ್ನು ಹುಬ್ಬೇರಿಸುವಂತೆ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ವಿಷ್ಣು ಮಂಚು ಕಣ್ಣಪ್ಪನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಖ್ಯಾತ ನಟಿ ಮಧುಬಾಲ ನಟಿಸಿದ್ದು ಇದೀಗ ಅವರು ಫಸ್ಟ್ ಲುಕ್ ರಿಲೀಸ್ ಆಗಿದೆ.
ನಟಿ ಮಧುಬಾಲಾ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬುದು ಈ ಹಿಂದೆಯೇ ರಿವೀಲ್ ಆಗಿತ್ತು. ಆದರೆ, ಅವರ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಈ ವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಮಧುಬಾಲ ಅವರ ಪಾತ್ರ ಪರಿಚಯದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕಣ್ಣಪ್ಪ ಚಿತ್ರದಲ್ಲಿ ಪನ್ನಗ ಹೆಸರಿನ ಖಡಕ್ ಪಾತ್ರದಲ್ಲಿ ಮಧುಬಾಲ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೆ ನಿಂತಂತಿದೆ ಮಧುಬಾಲಾ ಅವರ ಫಸ್ಟ್ ಲುಕ್.
ಬೇಡ ಕುಲದ ನಾಯಕಿಯಾಗಿ ಮಧುಬಾಲಾ ಅವರ ಪಾತ್ರ ಕಣ್ಣಪ್ಪ ಚಿತ್ರದಲ್ಲಿ ಸಾಗಲಿದೆ. ತಮ್ಮ ಸಮುದಾಯದ ನಾಯಕಿ ಮಾತ್ರವಲ್ಲ, ಹೋರಾಟದಲ್ಲಿಯೂ ದಿಟ್ಟೆ, ಧೀರೆ. ಅಂದುಕೊಂಡಂತೆ ಮಧುಬಾಲ ಅವರ ಪಾತ್ರ ಮೂಡಿಬಂದಿದ್ದು, ನೋಡುಗರಿಗೆ ಇಷ್ಟವಾಗಲಿದೆ ಎಂಬುದು ಚಿತ್ರತಂಡ ಭರವಸೆಯ ಮಾತುಗಳು. ಇನ್ನು ಈಗಾಗಲೇ ಕಣ್ಣಪ್ಪ ಚಿತ್ರದ ಟೀಸರ್ ಜಾಗತಿಕ ಮಟ್ಟದಲ್ಲಿಯೂ ಕ್ರೇಜ್ ಸೃಷ್ಟಿಸಿದೆ. ಇತ್ತೀಚಿನ ಕಾನ್ ಸಿನಿಮೋತ್ಸವದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿ, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು.
ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಲಾಗಿದೆ ಎಂದು ಟೀಸರ್ ಬಿಡುಗಡೆ ಸಂದರ್ಭದಲ್ಲಿ ವಿಷ್ಣು ಮಂಚು ಹೇಳಿಕೊಂಡಿದ್ದರು. ಹಾಗಾಗಿಯೇ ಕುತೂಹಲ ದುಪ್ಪಟ್ಟಾಗಿದೆ.
ಚಿತ್ರದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶರತ್ಕುಮಾರ್, ಮಧುಬಾಲ, ಕಾಜಲ್ ಅಗರ್ವಾಲ್ ಸೇರಿ ಬಹು ತಾರಾಗಣವೇ ಇದೆ. ಮಗನ ಚಿತ್ರವನ್ನು ಸ್ವತಃ ತಂದೆ ಮೋಹನ್ ಬಾಬು ನಿರ್ಮಿಸುತ್ತಿರುವ ಈ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ, ತಮಿಳು, ಕನ್ನಡ, ಮಲಯಾಳಂ, ಹಿಂದಿ ಸೇರಿ ಇನ್ನೂ ಹಲವು ಭಾರತೀಯ ಭಾಷೆಗಳಿಗೂ ಈ ಚಿತ್ರ ಡಬ್ ಆಗಿ ರಿಲೀಸ್ ಆಗಲಿದೆ. ಡಿಸೆಂಬರ್ನಲ್ಲಿ ‘ಕಣ್ಣಪ್ಪ’ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ ಚಿತ್ರತಂಡ.