ಇಂಡಿಯನ್ ಪ್ರೀಮಿಯರ್ ಲೀಗ್ ನ ಸೀಸನ್ 17 ರಲ್ಲಿ ಹೊಸ ಕ್ಯಾಪ್ಟನ್ ಜೊತೆ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಮುಂಬೈ ಇಂಡಿಯನ್ಸ್ ನಿರೀಕ್ಷೆ ತಕ್ಕಂತೆ ಪ್ರದರ್ಶನ ಬರುತ್ತಿಲ್ಲ.
ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡವು ಇದೀಗ ಮೂರನೇ ಪಂದ್ಯಕ್ಕಾಗಿ ಸಜ್ಜಾಗಿ ನಿಂತಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ (ಏ.1) ನಡೆಯಲಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಆದರೆ ಈ ಪಂದ್ಯವು ಹಾರ್ದಿಕ್ ಪಾಂಡ್ಯ ಪಾಲಿಗೆ ಅಗ್ನಿಪರೀಕ್ಷೆಯಾಗಿ ಮಾರ್ಪಡುವ ಸಾಧ್ಯತೆಯಿದೆ. ಏಕೆಂದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇದೇ ಮೊದಲ ಬಾರಿಗೆ ವಾಂಖೆಡೆ ಸ್ಟೇಡಿಯಂನಲ್ಲಿ ಕಣಕ್ಕಿಳಿಯುತ್ತಿದೆ. ಇದಕ್ಕೂ ಮುನ್ನ ಮುಂಬೈ ಅಹಮದಾಬಾದ್ ಮತ್ತು ಹೈದರಾಬಾದ್ನಲ್ಲಿ ಪಂದ್ಯಗಳನ್ನಾಡಿತ್ತು.
ಈ ಎರಡು ಪಂದ್ಯಗಳ ವೇಳೆ ರೋಹಿತ್ ಶರ್ಮಾ ಅವರ ಅಭಿಮಾನಿಗಳಿಂದ ಹಾರ್ದಿಕ್ ಪಾಂಡ್ಯ ನಿಂದನೆ ಅನುಭವಿಸಿದ್ದರು. ಅದರಲ್ಲೂ ಪಾಂಡ್ಯ ಅವರ ತವರು ಅಹಮದಾಬಾದ್ನಲ್ಲೂ ಮೂದಲಿಸಲಾಗಿತ್ತು. ಇದೀಗ ಮುಂಬೈ ಕಾ ರಾಜ ಖ್ಯಾತಿಯ ರೋಹಿತ್ ಶರ್ಮಾ ಅವರ ತವರು ಮೈದಾನ ವಾಂಖೆಡೆಯಲ್ಲಿ ಕಣಕ್ಕಿಳಿಯಲು ಮುಂಬೈ ಇಂಡಿಯನ್ಸ್ ಸಜ್ಜಾಗಿದೆ.