ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಎಲ್ಲಾ ತಂಡಗಳು ಸೀಸನ್ 16 ಗಾಗಿ ಭರದ ಸಿದ್ಧತೆಗಳನ್ನು ಆರಂಭಿಸಿದೆ. ಆದರೆ ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಬ್ಬರು ಆಟಗಾರರು ಗಾಯಗೊಂಡಿರುವುದು ಹೊಸ ಚಿಂತೆಗೆ ಕಾರಣವಾಗಿದೆ.
ಹೌದು, ಆರ್ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯಾ ವೇಗಿ ಜೋಶ್ ಹ್ಯಾಝಲ್ವುಡ್ ಪಾದದ ಸ್ನಾಯು ನೋವಿನ ಕಾರಣ ಭಾರತದ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಚಿಕಿತ್ಸೆ ಪಡೆಯಲು ಆಸ್ಟ್ರೇಲಿಯಾಗೆ ಮರಳಿದ್ದಾರೆ. ಹೀಗಾಗಿ ಜೋಶ್ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಈ ಪ್ರಶ್ನೆಯ ಬೆನ್ನಲ್ಲೇ ಇದೀಗ ಮತ್ತೋರ್ವ ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಗಾಯಗೊಂಡಿದ್ದಾರೆ. ಮೂರುವರೆ ತಿಂಗಳ ಹಿಂದೆ ಗಾಯಗೊಂಡಿದ್ದ ಮ್ಯಾಕ್ಸ್ವೆಲ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಮೈದಾನದಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲದೆ ಭಾರತದ ವಿರುದ್ಧ ಏಕದಿನ ಸರಣಿಗೂ ಅಭ್ಯಾಸ ನಡೆಸಲು ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಆದರೆ ಸೌತ್ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ವಿಕ್ಟೋರಿಯಾ ಪರ ಆಡಿದ್ದ ಮ್ಯಾಕ್ಸಿ ಫೀಲ್ಡಿಂಗ್ ವೇಳೆ ಮತ್ತೆ ಗಾಯ ಮಾಡಿಕೊಂಡಿದ್ದಾರೆ.
ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡಿದ್ದ ಮ್ಯಾಕ್ಸ್ವೆಲ್ ಚೆಂಡು ಹಿಡಿಯಲು ಯತ್ನಿಸಿದ್ದರು. ಈ ವೇಳೆ ಬಾಲ್ ಅವರ ಕೈಗೆ ಜೋರಾಗಿ ಬಡಿದಿದೆ. ಈ ಸಂದರ್ಭದಲ್ಲಿ ನೋವಿನಿಂದ ನರಳಿದ ಮ್ಯಾಕ್ಸ್ವೆಲ್ ಮೈದಾನದಲ್ಲಿ ಕುಸಿದರು. ಅಲ್ಲದೆ ನೋವಿನ ಕಾರಣ ಅರ್ಧದಲ್ಲೇ ಮೈದಾನವನ್ನು ತೊರೆದರು.
ಆ ಬಳಿಕ ಗ್ಲೆನ್ ಮ್ಯಾಕ್ಸ್ವೆಲ್ ಮೈದಾನಕ್ಕಿಳಿದಿಲ್ಲ. ಸದ್ಯ ಕೈಯ ಸ್ಕ್ಯಾನಿಂಗ್ ಮಾಡಲಾಗಿದ್ದು, ಈ ರಿಪೋರ್ಟ್ ಬಂದ ಬಳಿಕವಷ್ಟೇ ಗಾಯದ ಗಂಭೀರತೆ ಅರಿಯಲಿದೆ. ಹೀಗಾಗಿ ಗಾಯವು ಗಂಭೀರವಾಗಿದ್ದರೆ ಗ್ಲೆನ್ ಮ್ಯಾಕ್ಸ್ವೆಲ್ ಭಾರತದ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ.
ಇನ್ನು ಮಾರ್ಚ್ 31 ರೊಳಗೆ ಗಾಯದಿಂದ ಚೇತರಿಸಿಕೊಳ್ಳದಿದ್ದರೆ ಐಪಿಎಲ್ ಸೀಸನ್ 16 ನಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಟೂರ್ನಿ ಆರಂಭವಾಗಲು ತಿಂಗಳು ಮಾತ್ರ ಉಳಿದಿರುವಾಗ ಇಬ್ಬರು ಪ್ರಮುಖ ಆಟಗಾರರು ಗಾಯಗೊಂಡಿರುವ ಆರ್ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.