ಇಸ್ರೇಲ್ ಮೇಲೆ ಇರಾನ್ ಸದ್ಯದಲ್ಲೇ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದು, ಯುದ್ಧಕ್ಕೆ ಮುಂದಾಗದಂತೆ ಇರಾನ್ಗೆ ಬೈಡನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
‘ಇಸ್ರೇಲ್ನ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಯುದ್ಧದಲ್ಲಿ ಇಸ್ರೇಲ್ ದೇಶವನ್ನು ಬೆಂಬಲಿಸುತ್ತೇವೆ. ಇಸ್ರೇಲ್ಗೆ ಬೇಕಾದ ಎಲ್ಲ ಸಹಾಯವನ್ನು ಮಾಡಲಿದ್ದೇವೆ. ಯುದ್ಧ ನಡೆಸಿದರೆ ಇರಾನ್ ಯಶ ಕಾಣುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಡಮಾಸ್ಕಸ್ನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ದಾಳಿ ನಡೆಸಿ, ಕಾನ್ಸುಲರ್ ಅನೆಕ್ಸ್ ಅನ್ನು ನೆಲಸಮಗೊಳಿಸಿದೆ ಎಂದು ಇರಾನ್ ಆರೋಪಿಸಿತ್ತು. ದಾಳಿಯಿಂದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ನ (ಐಆರ್ಜಿಸಿ) ಏಳು ಸಿಬ್ಬಂದಿ ಮತ್ತು ಇಬ್ಬರು ಸಾರ್ವಜನಿಕರು ಮೃತಪಟ್ಟಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವುದಾಗಿ ಟೆಹ್ರಾನ್ ಶಪಥ ಮಾಡಿತ್ತು.
ಏಪ್ರಿಲ್ 1ರಂದು ನಡೆದ ವೈಮಾನಿಕ ದಾಳಿಯ ಹೊಣೆಯನ್ನು ಇಸ್ರೇಲ್ ಹೊತ್ತುಕೊಂಡಿಲ್ಲ. ಆದರೆ ಇರಾನ್ನ ನೆಲದ ಮೇಲಿನ ದಾಳಿಗೆ ಪ್ರತಿದಾಳಿ ನಡೆಸಿ ತಕ್ಕ ಶಿಕ್ಷೆ ನೀಡುವುದಾಗಿ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ.
ಸಂಭವನೀಯ ಇರಾನ್ ದಾಳಿಯನ್ನು ಎದುರಿಸಲು ಅಮೆರಿಕ ಸನ್ನದ್ಧವಾಗಿದೆ. ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ರಕ್ಷಣೆಗಾಗಿ ಯುದ್ಧ ನೌಕೆಗಳು ಧಾವಿಸಿವೆ ಎಂದು ವಾಲ್ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.