ಕಳೆದ ತಿಂಗಳು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ನ ಮಾಜಿ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧ್ಯಕ್ಷೀಯ ಚುನಾವಣೆ ಜೂನ್ 28ರಂದು ನಡೆಯಲಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ನಡೆಯಲಿರುವ ಚುನಾವಣೆಯಲ್ಲಿ ಐದು ಸಂಪ್ರದಾಯವಾದಿಗಳು ಮತ್ತು ಓರ್ವ ಸುಧಾರಣಾವಾದಿ ಅಭ್ಯರ್ಥಿ ಕಣದಲ್ಲಿದ್ದಾರೆ.
2020ರಿಂದ ಸಂಸತ್ನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಮುಹಮ್ಮದ್ ಬಘೆರ್ ಘಲಿಬಾಫ್(62 ವರ್ಷ), ರೈಸಿ ಸರಕಾರದ ಕಟ್ಟಾ ಬೆಂಬಲಿಗ ಅಮೀರ್ ಹುಸೇನ್ ಘಝಿಝಾದೆ ಹಷೆಮಿ(53 ವರ್ಷ), ಸಯೀದ್ ಜಲೀಲಿ(58 ವರ್ಷ), ಮಾಜಿ ಆರೋಗ್ಯ ಸಚಿವ ಮಸೂದ್ ಪೆಜೆಶ್ಕಿಯಾನ್(69 ವರ್ಷ), ಮುಸ್ತಫಾ ಪೌರ್ಮೋಹಮ್ಮದಿ(64 ವರ್ಷ), 2021ರಿಂದ ಟೆಹ್ರಾನ್ನ ಮೇಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಲಿರೆಜಾ ಜಕಾನಿ (58 ವರ್ಷ) ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.
ಅಜರ್ಬೈಜಾನ್ಗೆ ಅಣೆಕಟ್ಟೆ ಉದ್ಘಾಟನೆಗೆಂದು ಹೋಗಿದ್ದ ಇರಾನ್ ಅಧ್ಯಕ್ಷ ರೈಸಿ ಅವರು ವಿದೇಶಾಂಗ ಸಚಿವ, ತಮ್ಮ ಪ್ರತಿನಿಧಿ ಹಾಗೂ ಅಧಿಕಾರಿಯೊಬ್ಬರ ಸಮೇತ ತೆಹ್ರಾನ್ಗೆ 3 ಹೆಲಿಕಾಪ್ಟರ್ ತಂಡದೊಂದಿಗೆ ಮರಳುತ್ತಿದ್ದರು. 2 ಹೆಲಿಕಾಪ್ಟರ್ ಸುರಕ್ಷಿತವಾಗಿ ವಾಪಸು ಬಂದರೆ ಅಧ್ಯಕ್ಷ ಹಾಗೂ ವಿದೇಶಾಂಗ ಸಚಿವ ಇದ್ದ ಕಾಪ್ಟರ್ ಪತನಗೊಂಡು ಮೃತಪಟ್ಟಿದ್ದರು.