ಬೆಂಗಳೂರು: ರಾಜ್ಯ ಬಿಜೆಪಿಯವರು 40%ಕಮಿಷನ್ ಪಡೆದಿರುವುದು ಮೋದಿ ಆಶೀರ್ವಾದವೇ ? ಅಥವಾ ಶಾಪವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವಿಟ್ ಮಾಡಿರುವ ಸಿದ್ದರಾಮಯ್ಯ, ಜೆಪಿ ನಡ್ಡಾ ಅವರೇ, ತೆರಿಗೆ ಹಂಚಿಕೆಯ ತಾರತಮ್ಯ ನೀತಿಯಲ್ಲಿ ಕರ್ನಾಟಕ ಅಂದಾಜು ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡದ್ದು, ಕನ್ನಡಿಗರು ಕೇಂದ್ರಕ್ಕೆ ನೀಡುವ ಪ್ರತಿ ಒಂದು ರೂಪಾಯಿ ತೆರಿಗೆಯಲ್ಲಿ ಹದಿನೈದು ಪೈಸೆ ಮಾತ್ರ ವಾಪಸು ನೀಡುವುದು, ಮೋದಿಯವರ ಆಶೀರ್ವಾದವೇ ಶಾಪವೇ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಅನುದಾನ ಕಡಿತದಿಂದಾಗಿ ರಾಜ್ಯ ಸರ್ಕಾರ ಮಾಡಿಕೊಂಡ ಸಾಲ ರೂ.2.4.0 ಲಕ್ಷ ಕೋಟಿಗಳಿಂದ ರೂ.5.60 ಲಕ್ಷ ಕೋಟಿಗೆ ಏರಿಕೆಯಾಗಿದ್ದು ಮತ್ತು ಪ್ರತಿಯೊಬ್ಬ ಕನ್ನಡಿಗನ ತಲೆಮೇಲೆ ರೂ.86,000 ಸಾಲದ ಹೊರೆ ಬಿದ್ದಿರುವುದು ಮೋದಿ ಆಶೀರ್ವಾದವೇ? ಶಾಪವೇ? 2019ರಲ್ಲಿ ನೆರೆ ಹಾವಳಿ ನಷ್ಟಕ್ಕೆ ರೂ.35,000 ಕೋಟಿ ಪರಿಹಾರ ಕೇಳಿದ್ದರೂ, ಕೇವಲ ರೂ.1,869 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಟ್ಟಿದ್ದು, 2020 ಮತ್ತು 2021ರಲ್ಲಿಯೂ ಇದೇ ಅನ್ಯಾಯ ಮುಂದುವರಿಸಿದ್ದು ಮೋದಿ ಆಶೀರ್ವಾದವೇ? ಶಾಪವೇ?
ಕನ್ನಡಿಗರು ಕಟ್ಟಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಗಳನ್ನು ನುಂಗಿ ಹಾಕಿದ್ದು, ಕನ್ನಡಿಗರ ಹೆಮ್ಮೆಯ ‘ನಂದಿನಿ’ಯನ್ನು ಗುಜರಾತ್ ಮೂಲದ ‘ಅಮುಲ್’ ಆಪೋಶನ ತೆಗೆದುಕೊಳ್ಳಲು ಹೊರಟಿರುವುದು ಮೋದಿ ಆಶೀರ್ವಾದವೇ? ಶಾಪವೇ? ಐಬಿಪಿಎಸ್ ಮತ್ತು ಎಲ್ಐಸಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲಿಕ್ಕೆ ಅವಕಾಶ ನೀಡದೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಬರೆಯುವುದನ್ನು ಕಡ್ಡಾಯಗೊಳಿಸಿ ಕನ್ನಡಿಗ ಯುವಜನರ ಹೊಟ್ಟೆಗೆ ಹೊಡೆದದ್ದು ಮೋದಿ ಆಶೀರ್ವಾದವೇ? ಶಾಪವೇ? ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಆಕ್ರೋಶ ಹೊರ ಹಾಕಿದ್ದಾರೆ.