ಬೆಂಗಳೂರು;– ರಾಜ್ಯದ ಉಪಮುಖ್ಯಮಂತ್ರಿ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಮಾತೆತ್ತಿದ್ದರೆ ಬರಿ ಬ್ರ್ಯಾಂಡ್ ಬೆಂಗಳೂರು ಮಾಡುತ್ತೀವಿ, ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೀವಿ, ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಹೆಸರು ಬದಲಿಸುತ್ತೀವಿ ಎನ್ನುತ್ತಿದ್ದಾರೆ. ಅವರೇನು ಕೇವಲ ಬೆಂಗಳೂರಿಗಷ್ಟೇ ಡಿಸಿಎಂ ಆಗಿದ್ದಾರೆಯೇ? ಎಂದು ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ ಅರ್ಜುನ ಹಲಗಿಗೌಡರ ಪ್ರಶ್ನಿಸಿದರು.
ರಾಜ್ಯ ಸರ್ಕಾರವು ಬೆಂಗಳೂರು ಕೇಂದ್ರಿಕೃತ ಆಡಳಿತದ ಮೂಲಕ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿರುವುದನ್ನು ಅರ್ಜುನ ಹಲಗಿಗೌಡರ ನೇತೃತ್ವದಲ್ಲಿ ತೀವೃವಾಗಿ ಖಂಡಿಸುತ್ತೇವೆ.
ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅರ್ಜುನ ಹಲಗಿಗೌಡರ, ರಾಜ್ಯದ ಎಲ್ಲ ಭಾಗಗಳ ಎಲ್ಲ ಪಕ್ಷಗಳ ರಾಜಕಾರಣಿಗಳು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಇದರ ನೇರ ದುಷ್ಪರಿಣಾಮವೇ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಾಜ್ಯದ 224 ಶಾಸಕರುಗಳು ಬೆಂಗಳೂರಿನ ಚಿನ್ನದ ಬೆಲೆ ಬರುವ ಜಮೀನುಗಳನ್ನು ಕೊಂಡುಕೊಂಡು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿರುವುದರ ಪರಿಣಾಮವೇ ಕರ್ನಾಟಕ ಸಮಗ್ರ ಅಭಿವೃದ್ಧಿಯಾಗದೆ ಕುಂಠಿತವಾಗಲು ಪ್ರಮುಖ ಕಾರಣ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು
ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಹಾಗೂ ಹಾರೋಹಳ್ಳಿಗಳನ್ನು ಒಳಗೊಂಡ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಂದಿನವರೆಗೆ ಕೇವಲ ಬೆಂಗಳೂರು ಜಪ ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಈ ಎಲ್ಲ ಪ್ರದೇಶಗಳಲ್ಲಿರುವ ತಮ್ಮ ಬೇನಾಮಿ ಆಸ್ತಿಯ ಬೆಲೆಯನ್ನು ದುಪ್ಪಟ್ಟು ಮಾಡಿಕೊಳ್ಳುವ ದುರುದ್ದೇಶದಿಂದ ‘ಬ್ರ್ಯಾಂಡ್ ಬೆಂಗಳೂರು’ ಹೆಸರಲ್ಲಿ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಈಗಾಗಲೇ ದೊಡ್ಡ ನಗರವಾಗಿ ಹೊರಹೊಮ್ಮಿದೆ. ಎಲ್ಲ ಹೂಡಿಕೆಗಳನ್ನು ತಂದು ಬೆಂಗಳೂರಿಗೆ ತುರುಕಲಾಗುತ್ತಿದೆ. ಜನಸಂಖ್ಯೆ ಮಿತಿಮೀರಿದೆ. ಜನರಿಗೆ ಉಸಿರಾಡಲು ಕಾಷ್ಟವಾಗಿದೆ. ಟ್ರಾಫಿಕ್ನಲ್ಲೇ ಜೀವನ ಕಳೆಯುವಂತಾಗಿದೆ. ಸದ್ಯ ಬರಗಾಲದ ಪರಿಸ್ಥಿತಿ ಬೇರೆ. ಕುಡಿಯುವ ನೀರಿಗೂ ಹಾಹಾಕಾರ ಬಂದಿದೆ. ದೈನಂದಿನ ಡೆಂಘಿ ಪ್ರಕರಣಗಳು ಹೆಚ್ಚುತ್ತಿವೆ. ಕಸ ವಿಲೇವರಿಗೆ ಜಾಗ ಸಿಗದೆ ನಗರದ ಹೊರ ವಲಯಗಳಲ್ಲಿ ಬೇಕಾಬಿಟ್ಟಿ ಸುರಿಯಲಾಗುತ್ತಿದೆ. ಬೆಂಗಳೂರಿನಲ್ಲಿ ಸಮಸ್ಯೆಗಳು ಬೆಟ್ಟದಷ್ಟಿರುವಾಗ ಅವುಗಳನ್ನು ಪರಿಹರಿಸುವುದನ್ನು ಬಿಟ್ಟು ತಮ್ಮ ಆಸ್ತಿಪಾಸ್ತಿಗಳ ಬೆಲೆಯನ್ನು ದುಪ್ಪಟ್ಟು ಮಾಡಿಕೊಳ್ಳುವ ದುಷ್ಟ ಆಲೋಚನೆಯಲ್ಲೇ ಕಾಲಕಳೆಯುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದರು.
ರಿಯಲ್ ಎಸ್ಟೇಟ್ ದಂಧೆಗೆ ಬಹಿರಂಗ ಪ್ರೋತ್ಸಾಹ:
ಕನಕಪುರದ ಜನರಿಗೆ ತಮ್ಮ ಆಸ್ತಿಪಾಸ್ತಿಗಳಿಗೆ ಚಿನ್ನದ ಬೆಲೆ ಬರುತ್ತದೆ ಎಂಬ ಅಭಯವನ್ನು ಡಿ.ಕೆ.ಶಿವಕುಮಾರ್ ಕೊಟ್ಟಿದ್ದಾರೆ. ಈಗಾಗಲೇ ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ 1,450 ಕೋಟಿಯಷ್ಟು ನಮ್ಮ ವೈಯಕ್ತಿಕ ಆಸ್ತಿಯನ್ನು ಕೇವಲ ರಾಜಕೀಯ ಕ್ಷೇತ್ರದಿಂದ ಹಿಗ್ಗಿಸಿಕೊಂಡಿರುವ ಡಿಕೆ, ಈಗಿರುವ ಆಸ್ತಿಯ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿಕೊಡುವ ಶಕ್ತಿ ತಮ್ಮಲ್ಲಿದೆ ಎನ್ನುತ್ತಿದ್ದಾರೆ. ಈ ಮೂಲಕ ರಿಯಲ್ ಎಸ್ಟೇಟ್ ದಂಧೆಗೆ ಬಹಿರಂಗವಾಗಿ ಪ್ರೋತ್ಸಾಹ ಕೊಡುತ್ತಿದ್ದಾರೆ. ರಾಜ್ಯದಲ್ಲಿರುವ ಬೇರೆ ತಾಲೂಕುಗಳು ತಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ರಾಜ್ಯದಲ್ಲೇ ಕಡು ಬರಗಾಲವಿದ್ದರೂ ಬಜೆಟ್ ನಲ್ಲಿ ಹಣವಿಲ್ಲದಿದ್ದರೂ ಕೇವಲ ಬೆಂಗಳೂರಿಗೆ 45,000 ಕೋಟಿ ಹಣವನ್ನು ಅನುದಾನ ಪಡೆದುಕೊಂಡಿರುವುದು ಎಷ್ಟರಮಟ್ಟಿಗೆ ಸರಿ? ಇಂತಹ ತಾರತಮ್ಯ ಧೋರಣೆ ಏಕೆ? ಜಲಸಂಪನ್ಮೂಲ ಖಾತೆ ಹೊಂದಿರುವ ಡಿಕೆ ಶಿವಕುಮಾರ್ ಅವರು ಇಷ್ಟು ಹಣವನ್ನು ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗೆ ಬಳಸಿದ್ದರೆ ರಾಜ್ಯದ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗುತ್ತಿದ್ದವು. ಉತ್ತರ ಕರ್ನಾಟಕವು ರಾಜ್ಯದ ಅವಿಭಾಜ್ಯ ಅಂಗ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಮರೆಯಕೂಡದು. ಬೆಂಗಳೂರಷ್ಟೇ ಅವರಿಗೆ ಮುಖ್ಯ ಎಂದಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟು ಕೇವಲ ಬೆಂಗಳೂರು ಉಸ್ತುವಾರಿಯನ್ನು ನಿಭಾಯಿಸಿಕೊಂಡಿರಲಿ ಎಂದು ಅರ್ಜುನ ಹಲಗಿಗೌಡರ ಖಾರವಾಗಿ ಪ್ರತಿಕ್ರಿಯಿಸಿದರು.