ಇಂದು ಜಗತ್ತಿನಲಿ ಆಹಾರದ ವಿಚಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಂಸ್ಕರಿಸಿದ ಆಹಾರಗಳು, ಜಂಕ್ ಆಹಾರಗಳು ಮಾರುಕಟ್ಟೆಯನ್ನು ಆವರಿಸುವ ಜೊತೆಗೆ ಜನರ ನಿತ್ಯಜೀವನವನ್ನೂ ಆಕ್ರಮಿಸಿವೆ. ಇಂದಿನ ಧಾವಂತದ ಯುಗದಲ್ಲಿ ಎಲ್ಲರೂ ಬಹುಬೇಗನೆ ಆಗುವಂಥದ್ದರ ಮೊರೆ ಹೋಗುವುದು ಸಹಜ. ಆದರೆ, ಇದರ ಜೊತೆಜೊತೆಗೇ ಜನರಲ್ಲಿ ಆರೋಗ್ಯದ ಕಾಳಜಿಯೂ ಹೆಚ್ಚುತ್ತಿದೆ. ಹಳೆಯ ಪದ್ಧತಿಗಳಿಗೆ, ಹಳೆಯ ಆಹಾರಕ್ರಮಗಳಿಗೆ ಮತೆ ಮರಳುತ್ತಿದ್ದಾರೆ. ಅವುಗಳ ಪೈಕಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಕ್ರಮ ಎಂದರೆ, ಬೆಲ್ಲ ಹಾಕಿ ಚಹಾ ಮಾಡುವುದು.
ಸಕ್ಕರೆ ಬಳಸುವ ಬದಲು ಬೆಲ್ಲವನ್ನು ಬಳಸುವ ಮೂಲಕ ನಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತಿದ್ದೇವೆ ಎಂದು ನಾವಂದುಕೊಳ್ಳುತ್ತೇವೆ. ಇದು ಆರೋಗ್ಯಕರ ಎಂಬುದು ನಮ್ಮ ವಾದ. ಸಕ್ಕರೆ ಬಿಡುವುದು ಎಂದರೆ, ಬೆಲ್ಲವನ್ನು ತಿನ್ನಬಹುದು ಎಂದು ನಾವಂದುಕೊಂಡರೆ ಇದರಿಂದ ನಿಜಕ್ಕೂ ಲಾಭ ಪಡೆಯುತ್ತಿದ್ದೇವೆಯೇ ಎಂಬುದನ್ನು ನಾವಿಂದು ಯೋಚಿಸಬೇಕಾಗಿದೆ. ಬೆಲ್ಲ ಎಂದರೆ ಸಕ್ಕರೆಯಾಗಿ ಸಂಸ್ಕರಿಸುವ ಮೊದಲ ರೂಪ. ಸಕ್ಕರೆ ಹಾಗೂ ಬೆಲ್ಲ, ಇವೆರಡರ ಮೂಲವೂ ಒಂದೇ, ಅದು ಕಬ್ಬು. ಹಾಗಾಗಿ ಮೂಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಆದರೆ ಆರೋಗ್ಯದ ವಿಚಾರಕ್ಕೆ ಬಂದರೆ ಬೆಲ್ಲದಲ್ಲಿ ಸಾಕಷ್ಟು ಖನಿಜಾಂಶಗಳಿವೆ. ಪೋಷಕಾಂಶಗಳಿವೆ. ಹಾಗಾಗಿ ಆರೋಗ್ಯಕ್ಕೆ ಇದರಲ್ಲಿ ಸಕ್ಕರೆಗಿಂತ ಹೆಚ್ಚಿನ ಲಾಭಗಳಿವೆ. ಸಕ್ಕರೆಯಲ್ಲಿ ಅಂತಹ ಲಾಭಗಳೇನೂ ಇಲ್ಲ. ಸಕ್ಕರೆಯಿಂದ ಆರೋಗ್ಯಕ್ಕೆ ಹಾನಿಯೇ ಹೆಚ್ಚು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ, ಸಕ್ಕರೆಯನ್ನು ಬಿಟ್ಟು ಬೆಲ್ಲವನ್ನು ಬಳಸುವ ಮಂದಿ ಈಚೆಗೆ ಹೆಚ್ಚಾಗುತ್ತಿದ್ದಾರೆ.
ಬೆಲ್ಲ ಆರೋಗ್ಯಕರ ಆಯ್ಕೆಯೇನೋ ಹೌದು. ಬೆಲ್ಲದಲ್ಲಿ ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳು ಸ್ವಲ್ಪ ಇರುವುದು ನಿಜವಾದರೂ ಇದನ್ನು ಚಹಾಕ್ಕೆ ಬಳಸುವುದರಿಂದ ಲಾಭವಾಗುತ್ತದೆಯೋ ಎಂಬುದನ್ನು ನಾವು ತಜ್ಞರ ಮಾತಿನಲ್ಲಿ ಕೇಳಬೇಕಿದೆ. ಯಾಕೆಂದರೆ, ಚಹಾದಲ್ಲಿರುವ ಕೆಲವು ವಸ್ತುಗಳು, ನಮ್ಮ ದೇಹಕ್ಕೆ ಪೋಷಕಾಂಶಗಳು ಸೇರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತವೆ. ಹಾಗಾಗಿ, ಬೆಲ್ಲ ಚಹಾದ ಜೊತೆ ಸೇರಿಕೊಂಡಾಗ, ಬೆಲ್ಲದಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರದೆ ಇರುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ ಅದನ್ನು ಹೀರಿಕೊಳ್ಳಲು ಚಹಾ ಬಿಡುವುದಿಲ್ಲ. ಹೀಗಾಗಿ ಬೆಲ್ಲದ ಕಬ್ಬಿಣಾಂಶ, ಕ್ಯಾಲ್ಶಿಯಂಗಳು ದೇಹಕ್ಕೆ ಸೇರದೆ ನಷ್ಟವಾಗುತ್ತವೆ.
ದೇಹದಲ್ಲಿ ಇನ್ಸುಲಿನ್ ದಿಢೀರ್ ಏರಲು ಬೆಲ್ಲ, ಸಕ್ಕರೆಯೆಂಬ ಬೇಧವಿಲ್ಲ. ಎಲ್ಲದರಲ್ಲಿಯೂ ಇರುವುದು ಗ್ಲುಕೋಸ್. ಹಾಗಾಗಿ, ದೇಹದಲ್ಲಿ ಇದ್ದಕ್ಕಿದ್ದಂತೆ ಗ್ಲುಕೋಸ್ ಮಟ್ಟ ಏರಲು ಬೆಲ್ಲೂ ಕೂಡಾ ಸಕ್ಕರೆಯ ಹಾಗೆಯೇ ಕಾರಣವಾಗುತ್ತದೆ.
ಸಕ್ಕರೆಯುಕ್ತ ಚಹಾ ಸೇವಿಸುವುದರಿಂದ ತೊಂದರೆಯೇನಿಲ್ಲ. ಆದರೆ ಯಾವ ಸಮಯಕ್ಕೆ ಸೇವಿಸಬೇಕು ಎಂಬುದನ್ನು ಪಾಲಿಸಿ. ಬೆಳಗ್ಗೆ ಎದ್ದ ಕೂಡಲೇ ಸೇವಿಸಬೇಡಿ. ಸಂಜೆ ನಾಲ್ಕರ ನಂತರ ಸೇವಿಸುವುದೂ ಕೂಡಾ ಒಳ್ಳೆಯದಲ್ಲ. ರಾತ್ರಿ ಮಲಗುವ ಕನಿಷ್ಟ ಆರು ಗಂಟೆಯ ಮೊದಲು ಸೇವಿಸಿ. ಊಟದ ಜೊತೆಗೆ ಚಹಾ ಸೇವನೆಯೂ ಒಳ್ಳೆಯದಲ್ಲ. ಇದರಿಂದ ಆಹಾರದ ಪೋಷಕಾಂಶಗಳು ದೇಹಕ್ಕೆ ಸೇರದು. ಹಿತಮಿತವಾಗಿ ಚಹಾ ಕಾಫಿ ಸೇವನೆಯಿಂದ ಸಮಸ್ಯೆಯಿಲ್ಲ.