ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಣೆ ಮಾಡಿದ್ದ ಗ್ಯಾರಂಟಿಗಳು ಇದೀಗ ಭಾರೀ ಚರ್ಚೆಯಲ್ಲಿವೆ.. ಕಾಂಗ್ರೆಸ್ ಸರ್ಕಾರದ ಮೊದಲ ಸಂಪುಟ ಸಭೆಯಲ್ಲೇ ಎಲ್ಲಾ ಗ್ಯಾರಂಟಿಗಳೂ ಜಾರಿ ಆಗಲಿವೆ ಅನ್ನೋ ಕಾತರದಲ್ಲಿ ಜನತೆ ಇದ್ದಾರೆ. ಕರೆಂಟ್ ಬಿಲ್ ಕಟ್ಟಬೇಕೋ, ಬೇಡವೋ ಚರ್ಚೆ ಕೂಡಾ ಶುರುವಾಗಿಬಿಟ್ಟಿದೆ. ಆದ್ರೆ ಈ ಎಲ್ಲಾ ಗ್ಯಾರಂಟಿಗಳ ಜಾರಿ ಸಾಧ್ಯವೇ? ಖಜಾನೆ ಮೇಲೆ ಎಷ್ಟು ಹೊರೆ ಬೀಳುತ್ತೆ? ಗ್ಯಾರಂಟಿ ಲಾಭ ಎಲ್ಲರಿಗೂ ಸಿಗುತ್ತಾ? ಇನ್ಕಂ ಟ್ಯಾಕ್ಸ್ ಕಟ್ಟೋರಿಗೂ ಫ್ರೀ ಸ್ಕೀಂ ಅನ್ವಯ ಆಗುತ್ತಾ?
1 – ರಾಜ್ಯದ ಪ್ರತಿ ಕುಟುಂಬಕ್ಕೆ 200 ಯುನಿಟ್ ಉಚಿತ ವಿದ್ಯುತ್
2 – ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ ತಲಾ 10 ಕೆಜಿ ಅಕ್ಕಿ
3 – ಪ್ರತಿ ಕುಟುಂಬದ ಗೃಹಿಣಿಗೆ ತಿಂಗಳಿಗೆ 2 ಸಾವಿರ ರೂ.
4 – ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ.
5 – ನಿರುದ್ಯೋಗಿ ಡಿಪ್ಲಮೋದಾರರಿಗೆ ತಿಂಗಳಿಗೆ 1,500 ರೂ.
6 – ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
7 – ಮೀನುಗಾರರಿಗೆ ಪ್ರತಿ ವರ್ಷ 500 ಲೀಟರ್ ತೆರಿಗೆ ಮುಕ್ತ ಡೀಸೆಲ್
8 – ಸಮುದ್ರ ಮೀನುಗಾರಿಕೆ ರಜೆ ಸಮಯದಲ್ಲಿ ಪ್ರತಿ ಮೀನುಗಾರರಿಗೆ 6 ಸಾವಿರ ರೂ.
9 – ಪ್ರತಿ ಕೆಜಿ ಹಸುವಿನ ಸಗಣಿ 3 ರೂ.ಗೆ ಖರೀದಿ!
ಫ್ರೀ ಸ್ಕೀಂ ಜಾರಿಗೆ ಎಷ್ಟು ಹಣ ಬೇಕು?
ಒಂದು ಅಂದಾಜಿನ ಪ್ರಕಾರ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲಾ ಉಚಿತ ಭಾಗ್ಯಗಳನ್ನೂ ಜಾರಿ ಮಾಡೋಕೆ ಹೊರಟರೆ ವರ್ಷಕ್ಕೆ 62 ಸಾವಿರ ಕೋಟಿ ರೂಪಾಯಿ ಬೇಕಾಗುತ್ತೆ. ಅಂದರೆ, ನಮ್ಮ ರಾಜ್ಯದ ಬಜೆಟ್ನ ಶೇ. 20ರಷ್ಟು ಭಾಗ ಈ ಬಿಟ್ಟಿ ಭಾಗ್ಯಗಳಿಗೇ ಹೋಗುತ್ತದೆ. ಇದು ಖಂಡಿತವಾಗಿಯೂ ದೊಡ್ಡ ಹೊರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳ ಮೇಲೆ ಹೊಡೆತ ಬೀಳುತ್ತೆ. ಹೆಚ್ಚು ಹೆಚ್ಚು ಸಾಲ ಮಾಡಬೇಕಾಗುತ್ತೆ. ಹಾಗೆ ನೋಡಿದ್ರೆ ಕಳೆದ ಸಾಲಿನಲ್ಲೇ ಸರ್ಕಾರ ಕೊರತೆ ಬಜೆಟ್ ಮಂಡನೆ ಮಾಡಿತ್ತು. ರಾಜ್ಯಕ್ಕೆ 60 ಸಾವಿರ ಕೋಟಿ ರೂಪಾಯಿ ಕೊರತೆ ಎದುರಾಗಿತ್ತು. ಇದೀಗ ಎಲ್ಲ ಭಾಗ್ಯಗಳನ್ನೂ ಜಾರಿಗೆ ತಂದರೆ, ಹೊಸದಾಗಿ 62 ಸಾವಿರ ಕೋಟಿ ರೂಪಾಯಿ ಹೊರೆ ಬೀಳುತ್ತೆ.
ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಉಚಿತ ಭಾಗ್ಯ ಘೋಷಿಸಿದ್ದೇ ತಡ, ಚುನಾವಣೆಗೆ ಮುನ್ನವೇ ಇದರ ಚರ್ಚೆಗಳು ಶುರುವಾದವು. ಈ ಸಂದರ್ಭದಲ್ಲಿ ವಿಜಯ ಕರ್ನಾಟಕ ವೆಬ್ ಸಹೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಅಷ್ಟೇನೂ ಹೊರೆ ಆಗೋದಿಲ್ಲ ಎಂದಿದ್ದರು. ಉಚಿತ ಯೋಜನೆಗಳ ಜಾರಿಗೆ ರಾಜ್ಯ ಬಜೆಟ್ನ ಶೇಕಡಾ 15ಕ್ಕಿಂತಾ ಹೆಚ್ಚಿನ ಹೊರೆ ಬೀಳೋದಿಲ್ಲ ಎಂದಿದ್ದರು. ಮುಂದಿನ 5 ವರ್ಷಗಳಲ್ಲಿ ರಾಜ್ಯದ ಬಜೆಟ್ ಗಾತ್ರವೇ ಹೆಚ್ಚಾಗುತ್ತೆ. ಹೀಗಾಗಿ, ಉಚಿತ ಘೋಷಣೆಗಳನ್ನ ಜಾರಿ ಮಾಡಿದ್ರೆ ಅಷ್ಟೇನೂ ದೊಡ್ಡ ಮೊತ್ತ ಆಗೋದಿಲ್ಲ ಅನ್ನೋದು ಅವರ ವಾದವಾಗಿತ್ತು.
ಹೌದು..! ನೀವು ಬ್ಯಾಂಕ್ನಲ್ಲಿ ಯಾವುದಾದ್ರೂ ಹಣಕಾಸ ಯೋಜನೆ ಮಾಡಿಸೋಕೆ ಹೋದಾಗ ಅಲ್ಲಿ ಸಣ್ಣ ಅಕ್ಷರಗಳಲ್ಲಿ ಷರತ್ತುಗಳು ಅನ್ವಯ ಅಂತಾ ಬರೆದಿರುತ್ತಾರೆ. ಇದೇ ರೀತಿಯ ಷರತ್ತುಗಳು ಬಿಟ್ಟಿ ಭಾಗ್ಯಕ್ಕೂ ಅನ್ವಯ ಆಗುತ್ತೆ. ಹೀಗಾಗಿ, ಉಚಿತ ಭಾಗ್ಯಗಳ ಲಾಭ ಎಲ್ಲರಿಗೂ ಸಿಗೋದಿಲ್ಲ. ಬಡತನ ರೇಖೆಗಿಂತಾ ಕೆಳಗೆ ಇರೋರು, ಬಡವರು ಹಾಗೂ ಕೆಳ ಮಧ್ಯಮ ವರ್ಗದ ಜನರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತೆ ಅನ್ನೋ ಸೂಚನೆಯನ್ನ ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕೊಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಪ್ರಕಾರ ಉಚಿತ ಯೋಜನೆಗಳ ಒಟ್ಟು ವೆಚ್ಚ 62 ಸಾವಿರ ಕೋಟಿ ಆಗೋದಿಲ್ಲ. 40 ಸಾವಿರ ಕೋಟಿ ಆಗಬಹುದು ಅನ್ನೋದು ಅವರ ಲೆಕ್ಕ. ಬಜೆಟ್ನ 15 ಪರ್ಸೆಂಟ್ ಹಣ ಮಾತ್ರ ಈ ಉಚಿತ ಭಾಗ್ಯಕ್ಕೆ ಖರ್ಚಾಗುತ್ತೆ ಅಂತಾ ಕಾಂಗ್ರೆಸ್ ಹೇಳ್ತಿದೆ. ಜೊತೆಗೆ ಮೊದಲ ವರ್ಷವೇ ಎಲ್ಲಾ ಉಚಿತ ಯೋಜನೆಗಳನ್ನ ಘೋಷಿಸೋದೂ ಡೌಟು..
ರಾಜ್ಯದ ಪ್ರತಿ ಮನೆಗೂ 200 ಯುನಿಟ್ವರೆಗೆ ಉಚಿತ ವಿದ್ಯುತ್ ಕೊಡೋದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ನೀವು ನಿಮ್ಮ ಮನೆಯಲ್ಲಿ 200 ಯುನಿಟ್ಗಿಂತ ಒಂದೇ ಒಂದು ಯುನಿಟ್ ಹೆಚ್ಚಾಗಿ ಬಳಸಿದ್ರೂ ಈ ಯೋಜನೆಯ ಲಾಭ ಸಿಗಲ್ಲ! ದಿಲ್ಲಿಯಲ್ಲಿ ಎಎಪಿ ಇದೇ ಮಾದರಿಯನ್ನ ಜಾರಿ ಮಾಡಿದೆ. ಜೊತೆಗೆ ಆದಾಯ ತೆರಿಗೆ ಪಾವತಿ ಮಾಡ್ತಾ ಇರೋರಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಸಿಗುತ್ತಾ? ಈ ಕುರಿತಾಗಿ ಇನ್ನಷ್ಟು ಸ್ಪಷ್ಟತೆ ಬೇಕಾಗಿದೆ. ಇದೇ ರೀತಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಆಫರ್ ಇದೆಯಾದ್ರೂ, ಇದು ಕೇವಲ ಆರ್ಡಿನರಿ ಬಸ್ಗೆ ಸೀಮಿತವೋ? ಡಿಲಕ್ಸ್ ಬಸ್ಗಳಲ್ಲೂ ಉಚಿತ ಪ್ರಯಾಣ ಮಾಡಬಹುದೋ ಅನ್ನೋದು ಗೊತ್ತಾಗಬೇಕಿದೆ. ಅದೇನೇ ಇರಲಿ, ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ಸಾರಿಗೆ ಸಂಸ್ಥೆ ಇನ್ನಷ್ಟು ನಲುಗೋದು ಖಚಿತ.