ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದೆ. ನಿವೇದಿತಾ ಜೀವನದಲ್ಲಿ ಮೂರನೇ ವ್ಯಕ್ತಿ ಬಂದ ಕಾರಣಕ್ಕೆ ಇಬ್ಬರು ದೂರ ದೂರವಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬೆನ್ನಲ್ಲೇ ಚಂದನ್ ಹಾಗೂ ನಿವೇದಿತಾ ಗೌಡ ಸುದ್ದಿಗೋಷ್ಠಿ ನಡೆಸಿ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
‘ಒಬ್ಬ ಮೂರನೇ ವ್ಯಕ್ತಿಯನ್ನು ನಿವೇದಿತಾ ಹೆಸರಿಗೆ ಸೇರಿಸಿ ಸಂಬಂಧ ಕಲ್ಪಿಸಿದ್ದು ನನ್ನ ಮನಸ್ಸಿಗೆ ತುಂಬ ಬೇಸರ ಆಗಿದೆ. ಯಾಕೆಂದರೆ ಆ ವ್ಯಕ್ತಿಯ ಮನೆಗೆ ನಾನು ಕೂಡ ಅನೇಕ ಬಾರಿ ಹೋಗಿದ್ದೇನೆ. ತುಂಬ ಒಳ್ಳೆಯ ಕುಟುಂಬ ಅವರದ್ದು. ಅವರ ಮನೆಗೆ ಹೋಗುವುದು ನನಗೂ ಖುಷಿ ಆಗುತ್ತಿತ್ತು. ಅವರ ಕಾರ್ಯಕ್ರಮಕ್ಕೆ ನಾವಿಬ್ಬರು ಅನೇಕ ಬಾರಿ ಹೋಗಿದ್ದೆವು. ಆ ವ್ಯಕ್ತಿಯ ಜೊತೆ ನಿವೇದಿತಾ ಗೌಡ ಅವರ ಹೆಸರು ಸೇರಿಸುವಂತಹ ವಿಕೃತ ಮನಸ್ಥಿತಿ ನಮ್ಮ ಕನ್ನಡಿಗರಾದ್ದಾಗಿರಬಾರದು’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ನಿವೇದಿತಾ ಗೌಡ ಕೂಡ ಮಾತನಾಡಿದ್ದಾರೆ. ‘ಆ ರೀತಿಯ ಪೋಸ್ಟ್ಗಳನ್ನು ನೋಡಿದಾಗ ನನಗೆ ನೋವಾಯಿತು. ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್. ಪ್ರತಿ ವರ್ಷ ಅವರು ನನ್ನ ಜನ್ಮದಿನಕ್ಕೆ ವಿಶ್ ಮಾಡುತ್ತಾರೆ. ನಾನು ಕೂಡ ಅವರಿಗೆ ವಿಶ್ ಮಾಡುತ್ತೇನೆ. ಈ ವರ್ಷವೇ ಈ ರೀತಿ ವದಂತಿ ಹಬ್ಬಿದ್ದು ಯಾಕೆ ಅಂತ ಗೊತ್ತಿಲ್ಲ. ಇದರಿಂದ ಅವರ ಫ್ಯಾಮಿಲಿಯವರಿಗೆ ತುಂಬ ನೋವಾಗುತ್ತದೆ. ಲೈಕ್ಗಾಗಿ ಈ ರೀತಿ ಪೋಸ್ಟ್ ಮಾಡಬೇಡಿ’ ಎಂದು ನಿವೇದಿತಾ ಗೌಡ ಹೇಳಿದ್ದಾರೆ.
‘ನಿವೇದಿತಾ ಗೌಡ ಅವರು ನನ್ನಿಂದ ಯಾವುದೇ ಜೀವನಾಂಶ ಕೇಳಿಲ್ಲ. ನಾನು ಕೊಟ್ಟಿಲ್ಲ. ಮಗು ಪಡೆಯುವ ವಿಚಾರದಲ್ಲಿ ನಾನು ನಿವೇದಿತಾಗೆ ಒತ್ತಾಯ ಮಾಡಿದ್ದೇನೆ ಎಂಬ ವದಂತಿ ಕೂಡ ಹಬ್ಬಿದೆ. ಅದು ಸಹ ನಿಜವಲ್ಲ. ನಾನು ಒತ್ತಾಯ ಮಾಡಿಲ್ಲ. ಮಕ್ಕಳ ವಿಚಾರದಲ್ಲಿ ನಿವೇದಿತಾ ಕೂಡ ನಿರಾಕರಿಸಿಲ್ಲ’ ಎಂದು ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.