ಬೆಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ನಾಲ್ಕು ವರ್ಷ ಸಾರ್ವಜನಿಕವಾಗಿ ಕಣ್ಮರೆಯಾಗಿ ಈ ಬಾರಿ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಳೆದ 4 ತಿಂಗಳಿಂದ ಮುಂಚೂಣಿಗೆ ಬಂದಿದ್ದ ಉತ್ತರ ಕನ್ನಡ ಎಂಪಿ ಅನಂತಕುಮಾರ ಹೆಗಡೆಗೆ ಟಿಕೆಟ್ ಕೈತಪ್ಪಿದೆ. ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಬಿಜೆಪಿಯ ಎರಡನೇ ಪಟ್ಟಿ ಭಾನುವಾರ ಬಿಡುಗಡೆಯಾಗಿದೆ.
ಬೆಳಗಾವಿ, ಉತ್ತರ ಕನ್ನಡ, ರಾಯಚೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ನಿರೀಕ್ಷೆಯಂತೆ ಟಿಕೆಟ್ ಮಿಸ್ ಮಾಡಿಕೊಂಡಿದ್ದಾರೆ. ಅವರ ಬದಲಿಗೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದೆ.
ಹಿಂದೂ ಫೈರ್ ಬ್ರ್ಯಾಂಡ್ ಎಸಿನಿಕೊಳ್ಳುತ್ತಿದ್ದ ಅನಂತಕುಮಾರ ಹೆಗಡೆ ಅವರು ಇತ್ತೀಚೆಗೆ ಸಾಕಷ್ಟು ವಿವಾದಿತ ಹೇಳಿಕೆಗಳನ್ನು ನೀಡಿದ್ದರು. ಪ್ರಮುಖವಾಗಿ, ಸಿದ್ದರಾಮಯ್ಯ ಅವರಿಗೆ ಅವ್ಯಾಚ ಶಬ್ದಗಳ ಬಳಕೆ, ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು. ಸಂವಿಧಾನ ಬದಲಾವಣೆ ಎಂದಿದ್ದ ಅನಂತಕುಮಾರ್ ವಿರುದ್ಧ ಕಾಂಗ್ರೆಸ್ ಅಭಿಯಾನ ರೂಪಿಸಿತ್ತು. ಇದು ಬಿಜೆಪಿಗೆ ಚುನಾವಣೆಯಲ್ಲಿ ಹಿನ್ನೆಡೆ ಉಂಟು ಮಾಡುವ ಸಾಧ್ಯತೆ ಹೆಚ್ಚಿತ್ತು.