ವಿನಯ್ ಕುಮಾರ್ ಕರ್ನಾಟಕ ತಂಡದ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ? ಎಂಬ ಪ್ರಶ್ನೆಯನ್ನು ಕೆಎಸ್ಸಿಎ ಮುಂದಿರಿಸಿ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನಯ್ ಕುಮಾರ್ ಅವರ ಸಾಧನೆಗಳ ಬಗ್ಗೆ ಕ್ರೀಡಾ ವರದಿಗಾರ ಸುದರ್ಶನ್ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
“10 ವರ್ಷಗಳ ಹಿಂದೆ ಕರ್ನಾಟಕ ತಂಡವನ್ನು ರಣಜಿ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದವನು ನಮ್ಮೆಲ್ಲರ ಹೆಮ್ಮೆಯ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್.
ನಾನು ಆತನನ್ನು “ದೇಶೀಯ ಕ್ರಿಕೆಟ್’ನ ಕಿಂಗ್” ಎನ್ನುತ್ತೇನೆ. ಅಂಥಾ ಒಬ್ಬ ನಾಯಕನನ್ನು, ಅಂಥಾ ಒಬ್ಬ ಕ್ರಿಕೆಟಿಗನನ್ನು ಭಾರತದ ದೇಶೀಯ ಕ್ರಿಕೆಟ್ ತನ್ನ ಇತಿಹಾಸದಲ್ಲೇ ಕಂಡಿಲ್ಲ. ಸತತ ಎರಡು ವರ್ಷ ಎರಡು ರಣಜಿ ಟ್ರೋಫಿ, ಎರಡು ಇರಾನಿ ಕಪ್, ಎರಡು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದ ಮತ್ತೊಂದು ತಂಡ, ಮತ್ತೊಬ್ಬ ನಾಯಕನನ್ನು ತೋರಿಸಿ.. ಸಾಧ್ಯವೇ ಇಲ್ಲ. ಕಾರಣ, ಈ ಸಾಧನೆ ಮಾಡಿರುವುದು ಕರ್ನಾಟಕ ತಂಡ ಮಾತ್ರ..
ಕರ್ನಾಟಕ ತಂಡಕ್ಕೆ ಅಂಥಾ ಒಂದು ಕಿರೀಟ ತೊಡಿಸಿರುವುದು ವಿನಯ್ ಕುಮಾರ್ ಮಾತ್ರ. 2013-14ನೇ ಸಾಲಿನಲ್ಲಿ ಕರ್ನಾಟಕದ ರಣಜಿ ವಿಕ್ರಮವನ್ನು ವಿವರಿಸುವಾಗ ಆ ಸೆಮಿಫೈನಲ್ ಪಂದ್ಯದ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯದಿದ್ದರೆ ಮಹಾಪರಾಧವಾಗಿ ಬಿಡುತ್ತದೆ.