ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ 2023ರ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೀನಾಯ ಆರಂಭ ಕಂಡಿತ್ತು. ಐದು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ಎದುರು ಭಾನುವಾರ (ಅಕ್ಟೋಬರ್ 8) ನಡೆದ ಪಂದ್ಯದಲ್ಲಿ ಕೇವಲ 200 ರನ್ಗಳ ಗುರಿ ಬೆನ್ನತ್ತಿದ್ದ ಭಾರತ ತಂಡ ಆರಂಭಿಕ ಆಘಾತ ಕಂಡಿತ್ತು. ಆಸ್ಟ್ರೇಲಿಯಾದ ವೇಗಿಗಳ ಎದುರು 2 ರನ್ ಗಳಿಸುವ ಹೊತ್ತಿಗಾಗಗಲೇ 3 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಆರಂಭಿಕ ಬ್ಯಾಟರ್ಗಳಾದ ಇಶಾನ್ ಕಿಶನ್ (0), ರೋಹಿತ್ ಶರ್ಮಾ (0) ಮತ್ತು ಶ್ರೇಯಸ್ ಅಯ್ಯರ್ (0) ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದ್ದರು.
ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳು ಶೂನ್ಯ ಸಂಪಾದನೆಯಲ್ಲಿ ಪೆವಿಲಿಯನ್ ಸೇಡುವ ಮೂಲಕ ಟೂರ್ನಿಯಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗ ಅತ್ಯಂತ ಹೀನಾಯ ಆರಂಭ ಕಂಡಿತ್ತು. ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಟೀಮ್ ಇಂಡಿಯಾದ ಇಬ್ಬರೂ ಓಪನರ್ಗಳು ಡಕ್ಔಟ್ ಆಗಿದ್ದು 1983ರ ಬಳಿಕ ಇದೇ ಮೊದಲ ಬಾರಿ ಆಗಿದೆ. ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮಾ ಈ ಅನಗತ್ಯ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ರನ್ ಚೇಸಿಂಗ್ ವೇಳೆ ಆಸ್ಟ್ರೇಲಿಯಾದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎದುರು ಮೊದಲ ಓವರ್ನಲ್ಲೇ ಅನಗತ್ಯ ಬಿಡುಸಿನ ಹೊಡೆತಕ್ಕೆ ಕೈಹಾಕಿದ ಇಶಾನ್ ಇಶನ್, ಮೊದಲ ಸ್ಲಿಪ್ನಲ್ಲಿ ನಿಂತಿದ್ದ ಕ್ಯಾಮೆರಾನ್ ಗ್ರೀನ್ಗೆ ಕ್ಯಾಚಿತ್ತರು. ಬಳಿಕ ಎರಡನೇ ಓವರ್ನಲ್ಲಿ ಬಲಗೈ ವೇಗಿ ಜಾಶ್ ಹೇಝಲ್ವುಡ್ ಅವರ ಇನ್ ಸ್ವಿಂಗ್ ಎಸೆತವನ್ನು ನಿಯಂತ್ರಿಸಲು ವಿಫಲರಾದ ರೋಹಿತ್ ಶರ್ಮಾ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಡಿಆರ್ಎಸ್ ತೆಗೆದುಕೊಂಡರೂ ರೋಹಿತ್ಗೆ ಅದೃಷ್ಟ ಕೈ ಹಿಡಿಯಲಿಲ್ಲ. ಇದರೊಂದಿಗೆ ಭಾರತ ತಂಡದ ಇಬ್ಬರೂ ಓಪನರ್ಗಳು ಪೆವಿಲಿಯನ್ ಸೇರಿದ್ದರು.
1983ರ ವಿಶ್ವಕಪ್ನಲ್ಲೂ ಓಪನರ್ಸ್ ಡನ್ಔಟ್
ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿ ಭಾರತ ತಂಡದ ಆರಂಭಿಕ ಬ್ಯಾಟರ್ಗಳಿಬ್ಬರೂ ಡಕ್ಔಟ್ ಆಗಿದ್ದು 1983ರಲ್ಲಿ. ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದಿದ್ದ 3ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಆರಂಭಿಕರಾದ ಸುನೀಲ್ ಗವಾಸ್ಕರ್ ಮತ್ತು ನಕೃಷ್ಣಾಮಚಾರಿ ಶ್ರೀಕಾಂತ್ ಡಕ್ಔಟ್ ಆಗಿದ್ದರು. ಆದರೂ, ಭಾರತ ತಂಡ ಆ ಪಂದ್ಯದಲ್ಲಿ ಜಯ ದಾಖಲಿಸಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ನಾಯಕ ಕಪಿಲ್ ದೇವ್, ಅಂದಿನ ವಿಶ್ವ ದಾಖಲೆಯ ಇನಿಂಗ್ಸ್ ಆಗಿ ಅಜೇಯ 175 ರನ್ ಬಾರಿಸಿ ಭಾರತ ತಂಡದ ಜಯದ ರೂವಾರಿ ಎನಿಸಿದ್ದರು. ಅಂದಹಾಗೆ ಈ ಪಂದ್ಯದಲ್ಲೂ ಭಾರತ ತಂಡದ ಮೊದಲ ಮೂರು ವಿಕೆಟ್ಗಳು ಡಕ್ಔಟ್ ಆಗಿದ್ದವು.