ಲಾಹೋರ್: “ಪಾಕಿಸ್ಥಾನದ ಹಿರಿಯ ಪತ್ರಕರ್ತ ಅರ್ಷದ್ ಶರೀಫ್ ಅವರ ಬರ್ಬರ ಹತ್ಯೆಯಲ್ಲಿ ಐಎಸ್ಐ ಅಧಿಕಾರಿ ಮೇಜರ್ ಜನರಲ್ ಫೈಸಲ್ ನಸೀರ್ ಅವರ ಕೈವಾಡವಿದೆ” ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪ ಮಾಡಿದ್ದಾರೆ.
ಪಾಕಿಸ್ಥಾನ ಸೇನೆಯ ವಿಮರ್ಶಕರಾಗಿದ್ದ ಅರ್ಷದ್ ಶರೀಫ್, ತಮ್ಮ ಪ್ರಾಣಕ್ಕೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಕೀನ್ಯಾಗೆ ಹೋಗಿ ನೆಲೆಸಿದ್ದರು. ಕಳೆದ ಅಕ್ಟೋಬರ್ನಲ್ಲಿ ಕೀನ್ಯಾದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅರ್ಷದ್ ಶರೀಫ್ ಹತ್ಯೆಯ ಕುರಿತು ಪಾಕಿಸ್ಥಾನದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪವಾಗಿತ್ತು.
ಈ ಕುರಿತು ಲಾಹೋರ್ನಲ್ಲಿ ನಡೆದ ಪಾಕಿಸ್ಥಾನ್ ತೆಹ್ರೀಕ್ ಇ ಇನ್ಸಾಫ್(ಪಿಟಿಐ) ರ್ಯಾಲಿಯಲ್ಲಿ ಮಾತನಾಡಿದ ಇಮ್ರಾನ್ ಖಾನ್, “ನನ್ನನ್ನು ಹತ್ಯೆ ಮಾಡಲು ಮೇಜರ್ ಜನರಲ್ ಫೈಸಲ್ ನಸೀರ್ ಎರಡು ಬಾರಿ ಪ್ರಯತ್ನಿ ಸಿದ್ದರು. ಅಲ್ಲದೇ ಪಿಟಿಐ ಸಂಸದ ಅಜಮ್ ಸ್ವಾತಿ ಅವರನ್ನು ಬೆತ್ತಲೆಗೊಳಿಸಿ, ತೀವ್ರವಾಗಿ ದೈಹಿಕ ಹಿಂಸೆ ನೀಡಿದ್ದರು’ ಎಂದು ಆರೋಪಿಸಿದ್ದಾರೆ. ಅಲ್ಲದೆ ಅರ್ಷದ್ ಶರೀಫ್ ಹತ್ಯೆಯ ಹಿಂದಿರುವ ಕೈ ಕೂಡ ಮೇಜರ್ ಜನರಲ್ ಫೈಸಲ್ ನಸೀರ್ ಅವರದ್ದೇ ಎಂದು ಗಂಭೀರ ಆರೋಪ ಮಾಡಿದ್ದಾರೆ.