ಬೆಂಗಳೂರು : ನೈಸ್ ಯೋಜನೆಗೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಸಹಿ ಹಾಕಿದ್ದು ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ ಸಾಲು ಸಾಲು ಪ್ರಶ್ನೆಗಳನ್ನು, ಸವಾಲುಗಳನ್ನು ಟ್ವೀಟ್ ಮೂಲಕ ಡಿಕೆ ಶಿವಕುಮಾರ್ ಅವರ ಮುಂದಿಟ್ಟಿದ್ದಾರೆ. ಜೊತೆಗೆ ರಾಜ್ಯವನ್ನೇ ದೋಚಿದ ಖಾಸಗಿ ಕಂಪನಿಗೆ ‘ಪೊಲಿಟಿಕಲ್ ಏಜೆಂಟ್’ ಆಗುವುದಕ್ಕೆ ಅಸಹ್ಯ ಅನಿಸುವುದಿಲ್ಲವೇ? ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನೈಸ್ ಯೋಜನೆಗೆ ಎಚ್ಡಿ ದೇವೇಗೌಡ ಅವರೇ ಸಹಿ ಹಾಕಿದ್ದು ಎಂದು ಹೇಳುವ ಮೂಲಕ ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು. ಆದರೆ, ಅದೇ ದೇವೇಗೌಡರ ಕಾಲದಲ್ಲಿ ಆಗಿದ್ದ ಮೂಲ ಒಪ್ಪಂದದ ಬಗ್ಗೆ ಅವರದ್ದು ಧ್ಯಾನಸ್ಥ ಮೌನ. ಯಾಕೆ? ಎಂದು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.