ಇಸ್ರೇಲ್: ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ಸೇನಾ ಪಡೆ ತೀವ್ರಗೊಳಿಸಿದೆ. ಮೂರು ವಾರದಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 10 ಸಾವಿರದ ಗಡಿ ದಾಟಿದೆ. ಉತ್ತರ ಹಾಗೂ ದಕ್ಷಿಣ ಗಾಜಾದ ಹಲವು ಪ್ರದೇಶಗಳ ಮೇಲೆ ಮಂಗಳವಾರ ದಾಳಿ ನಡೆಸಿರುವ ಇಸ್ರೇಲ್ ಭೂ ಸೇನೆ, ಹಮಾಸ್ ಉಗ್ರರ ಅಡಗು ತಾಣಗಳನ್ನು ಹುಡುಕಿ ಹುಡುಕಿ ಧ್ವಂಸಗೊಳಿಸುತ್ತಿದೆ.
ಯುದ್ಧ ಟ್ಯಾಂಕ್ಗಳು, ಮೆಷಿನ್ ಗನ್ಗಳು, ಕ್ಷಿಪಣಿ ನಿರೋಧಕ ಟ್ಯಾಂಕರ್ಗಳನ್ನು ಬಳಸಿಕೊಂಡು ವ್ಯಾಪಕ ದಾಳಿ ನಡೆಸಿರುವ ವರದಿಯಾಗಿದೆ. ಗಾಜಾ ಪಟ್ಟಿಯಲ್ಲಿದ್ದ ಉಗ್ರರ ಮೂಲ ಸೌಕರ್ಯ ಹೊಂದಿದ್ದ ಮುನ್ನೂರು ಪ್ರದೇಶಗಳ ಮೇಲೆ ಇಸ್ರೇಲ್ ಸೇನೆ ಬಾಂಬ್ ದಾಳಿ ನಡಸಿದೆ. ಉಗ್ರರ ಸುರಂಗ ಮಾರ್ಗಗಳು, ಲಾಂಚ್ ಪ್ಯಾಡ್ಗಳು, ಶಸ್ತ್ರಾಗಾರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ಇಸ್ರೇಲ್ ರಕ್ಷಣಾ ಪಡೆಯ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮತ್ತೊಬ್ಬ ಹಮಾಸ್ ಕಮಾಂಡರ್ ಹತನಾಗಿದ್ದಾನೆ.
ಅಕ್ಟೋಬರ್ 7 ರಂದು ನಡೆದ ದಾಳಿಯ ಹಿಂದಿನ ಸೂತ್ರಧಾರ ಎಂದು ಹೇಳಲಾದ ಉಗ್ರನನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ಈ ನಡುವೆ ಹಮಾಸ್ ಉಗ್ರರ ವಶದಲ್ಲಿದ್ದ ಐಡಿಎಫ್ ಯೋಧರನ್ನು ರಕ್ಷಣೆ ಮಾಡಲಾಗಿದ್ದು, ಇನ್ನೂ 224 ಒತ್ತೆಯಾಳುಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಇಸ್ರೇಲ್ ಸರಕಾರ ಹೇಳಿದೆ.