ಜೆರೂಸಲೇಂ: ಇಸ್ರೇಲ್ ಸೇನೆಯನ್ನು ಗುರಿಯಾಗಿಸಿಕೊಂಡು ಸಿರಿಯಾ ಕಡೆಯಿಂದ ನಡೆಸಲಾಗಿದ್ದ ಆರು ರಾಕೆಟ್ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇದೇ ಮೊದಲ ಬಾರಿಗೆ ಇಂಥ ದಾಳಿ ನಡೆದಿದ್ದು, ಒಟ್ಟು ಎರಡು ಹಂತದಲ್ಲಿ ತಲಾ ಮೂರು ರಾಕೆಟ್ಗಳು ದಾಳಿ ನಡೆಸಿವೆ. ಈ ದಾಳಿಯಿಂದ ಯಾವುದೇ ಸಾವು ನೋವು ಉಂಟಾಗಿಲ್ಲ. ಸಿರಿಯಾ ಕಡೆಯಿಂದ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಸಿರಿಯಾ ಸೇನೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಫಿರಂಗಿ ದಾಳಿ ನಡೆಸಿದೆ.
ಡಮಾಸ್ಕಸ್ ಮೂಲದ ಪ್ಯಾಲೆಸ್ತೀನಿ ಪ್ರತ್ಯೇಕತಾವಾದಿ ಸಂಘಟನೆ ಅಲ್-ಕುಡ್ಸ್ ಬ್ರಿಗೇಡ್ ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದು, ಗಾಜಾ, ಲೆಬನಾನ್ಗಳಲ್ಲಿ ಕಳೆದ ಕೆಲದಿನಗಳಿಂದ ಉಂಟಾಗಿರುವ ಸಂಘರ್ಷ ಬಿಗಡಾಯಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಶನಿವಾರ ಸಿರಿಯಾ ಕಡೆಯಿಂದ ನಡೆಸಲಾಗಿದ್ದು ಮೊದಲ ಹಂತದಲ್ಲಿ ಒಂದು ರಾಕೆಟ್ ಇಸ್ರೇಲ್ ನಿಯಂತ್ರಣ ಇರುವ ಗೋಲನ್ ಹೈಟ್ಸ್ ಎಂಬ ಸ್ಥಳದಲ್ಲಿ ಬಿದ್ದಿದೆ. ಮತ್ತೊಂದನ್ನು ಮಧ್ಯದಲ್ಲೇ ಛೇದಿಸಲಾಗಿತ್ತು. ಹೀಗಾಗಿ, ಅದು ಸಿರಿಯಾ ಗಡಿಗೆ ಹೊಂದಿಕೊಂಡು ಇರುವ ಜೋರ್ಡನ್ನ ನೆಲದಲ್ಲಿ ಬಿದ್ದಿದೆ.