ಇರಾನ್ ಮೇಲೆ ನಡೆಸಿದ ಮೂರು ಸುತ್ತಿನ ದಾಳಿ ಬಳಿಕ ಸೇನಾ ಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ಇಸ್ರೇಲ್ನ ಅಧಿಕೃತ ಸುದ್ದಿಸಂಸ್ಥೆ ಪ್ರಕಟಿಸಿದೆ.
ಇದೇ ತಿಂಗಳ ಆರಂಭದಲ್ಲಿ ಇಸ್ರೇಲ್ ವಿರುದ್ಧ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು. ಇರಾನ್ ಬೆಂಬಲಿತ ಹಿಜ್ಬುಲ್ಲಾ ನಾಯಕರನ್ನು ಲೆಬನಾನ್ನಲ್ಲಿ ಹತ್ಯೆ ಮಾಡಿದ ಬಳಿಕ ಈ ದಾಳಿ ಸಂಘಟಿಸಲಾಗಿತ್ತು. ಇದು ಕಳೆದ ಆರು ತಿಂಗಳಲ್ಲಿ, ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ನೇರ ದಾಳಿಯಾಗಿತ್ತು.
ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಕಾರವಾಗಿ, ಕಾರ್ಯಾಚರಣೆ ನಡೆಸುವುದಾಗಿ ಇಸ್ರೇಲ್ ಸೇನೆ ಇಂದು ಬೆಳಿಗ್ಗೆ ತಿಳಿಸಿತ್ತು. ಸೇನಾ ಪಡೆ ಮುಖ್ಯಸ್ಥ ಹರ್ಜಿ ಹಲೇವಿ ಅವರು ವಾಯು ಪಡೆಯ ರಹಸ್ಯ ಕಮಾಂಡ್ ಸೆಂಟರ್ನಲ್ಲಿ ಆದೇಶಗಳನ್ನು ನೀಡುತ್ತಿದ್ದಾರೆ ಎಂದೂ ಹೇಳಿತ್ತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಧಿಕಾರಿಗಳ ಸಭೆ ನಡೆಸಿದ್ದರು. ಇರಾನ್ ರಾಜಧಾನಿ ಟೆಹರಾನ್ ಸಮೀಪ ಸೇನಾ ನೆಲೆಗಳ ಮೇಲೆ ದಾಳಿಗಳು ನಡೆದಿರುವ ಬಗ್ಗೆ ವರದಿಯಾಗಿತ್ತು.
ಇರಾನ್ ಮೇಲೆ ಮೂರು ಸುತ್ತಿನ ದಾಳಿ ನಡೆಸಲಾಗಿದೆ. ಕ್ಷಿಪಣಿ, ಡ್ರೋನ್ ನೆಲೆಗಳು ಹಾಗೂ ತಯಾರಿಕಾ ಕೇಂದ್ರಗಳನ್ನು ಗುರಿಯಾಗಿಸಿ ಎರಡು ಹಾಗೂ ಮೂರನೇ ಸುತ್ತಿನ ದಾಳಿ ಸಂಘಟಿಸಲಾಗಿದೆ ಎಂದು ಯುಎಸ್ ಹಾಗೂ ಇಸ್ರೇಲ್ ಅಧಿಕಾರಿಗಳು ಬೆಳಿಗ್ಗೆಯೇ ತಿಳಿಸಿದ್ದರು. ಇದೀಗ, ಕಾರ್ಯಾಚರಣೆ ಮುಕ್ತಾಯಗೊಂಡಿರುವುದಾಗಿ ಇಸ್ರೇಲ್ನ ಅಧಿಕೃತ ಸುದ್ದಿಸಂಸ್ಥೆ ಹೇಳಿದೆ.