ಯುದ್ಧಪೀಡಿತ ಗಾಝಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 35 ಮಂದಿ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಗಾಝಾದಲ್ಲಿ ಸ್ಥಳಾಂತರಿತ ನಾಗರಿಕರಿಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಡೇರೆಯ ಮೇಲೆ ಈ ದಾಳಿ ನಡೆದಿದೆ. ಹೊತ್ತಿ ಉರಿಯುತ್ತಿರುವ ಅವಶೇಷಗಳಡಿ ಹಲವು ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ. ಹತ್ತಾರು ಮಂದಿ ಗಾಯಗೊಂಡಿದ್ದು, ಮೃತಪಟ್ಟವರಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ರಫಾ ದಲ್ಲಿ ಮಿಲಿಟರಿ ದಾಳಿಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯ ಆದೇಶ ನೀಡಿದ ಎರಡು ದಿನಗಳಲ್ಲೇ ಇಸ್ರೇಲ್ ನ ಈ ಅಮಾನವೀಯ ದಾಳಿ ನಡೆದಿದೆ. ಇಸ್ರೇಲ್ ದಾಳಿ ಆರಂಭಕ್ಕೆ ಮುನ್ನ ಗಾಝಾದ ಅರ್ಧದಷ್ಟು ಜನ ಈ ಭಾಗದಲ್ಲಿ ಆಸರೆ ಪಡೆದಿದ್ದರು
ಈ ಅತ್ಯಂತ ಭಯಾನಕ ದಾಳಿಯ ದೃಶ್ಯಾವಳಿಗಳು, ಭಾರಿ ಹಾನಿಯುಂಟಾಗಿರುವುದನ್ನು ತೋರಿಸುತ್ತವೆ. ಇಸ್ರೇಲ್ ಕೂಡಾ ಈ ದಾಳಿಯನ್ನು ದೃಢಪಡಿಸಿದ್ದು, ಹಮಾಸ್ ನ ಸ್ಥಾವರಗಳನ್ನು ಗುರಿ ಮಾಡಿ ನಡೆಸಿದ ದಾಳಿಯಲ್ಲಿ ಇಬ್ಬರು ಹಿರಿಯ ಹಮಾಸ್ ಹೋರಾಟಗಾರರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ನಾಗರಿಕರಿಗೆ ಕೂಡಾ ಹಾನಿಯಾಗಿದೆ ಎಂಬ ವರದಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿವರಿಸಿದೆ. ರಕ್ಷಣಾ ಸಚಿವ ಯೋವ್ ಗ್ಯಾಲೆಂಟ್ ಭಾನುವಾರ ರಫಾಗೆ ಭೇಟಿ ನೀಡಿದ್ದು, ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ತಿಳಿಸಿದ್ದರು.
ರಫಾ ನಗರದ ಕೇಂದ್ರಭಾಗದಿಂದ ಎರಡು ಕಿಲೋಮೀಟರ್ ವಾಯವ್ಯಕ್ಕೆ ಅಂದರೆ ಟೆಲ್ ಅಲ್-ಸುಲ್ತಾನ್ ಪರಿಸರದಲ್ಲಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿಯ ವಕ್ತಾರರು ಹೇಳಿದ್ದಾರೆ