ಟೆಲ್ ಅವೀವ್: ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ನಡೆಸಿದ ವೈಮಾನಿಕ ದಾಳಿಯಿಂದ (Air Strike) ಕನಿಷ್ಠ 195 ಪ್ಯಾಲೆಸ್ತೀನ್ನ (Palestine) ನಾಗರೀಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಸುಮಾರು 770ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದಾಳಿಯ ನಂತರ 120 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಈ ನಡುವೆ ಓರ್ವ ಇಸ್ರೇಲ್ ಸೈನಿಕ ಕೂಡ ಸಾವನ್ನಪ್ಪಿದ್ದಾನೆ ಎಂದು ಹಮಾಸ್ ಹೇಳಿದೆ. ಕಳೆದ ಎರಡು ದಿನಗಳ ದಾಳಿಯಲ್ಲಿ ಇಬ್ಬರು ಹಮಾಸ್ ಮಿಲಿಟರಿ ನಾಯಕರನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ. ಅಲ್ಲದೇ ಇನ್ನೂ ಅಡಗಿರುವ ಹಮಾಸ್ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇಸ್ರೇಲ್, ಈಜಿಪ್ಟ್ ಮತ್ತು ಹಮಾಸ್ ನಡುವಿನ ಒಪ್ಪಂದದ ಅಡಿಯಲ್ಲಿ 500 ಜನರ ಪಟ್ಟಿಯಲ್ಲಿ ಕನಿಷ್ಠ 320 ವಿದೇಶಿ ನಾಗರಿಕರನ್ನು ಈಜಿಫ್ಟ್ಗೆ ಕಳುಹಿಸಲಾಗಿದೆ. ಉಳಿದ ವಿದೇಶಿ ನಾಗರಿಕರನ್ನು ಯುದ್ಧ ಪ್ರದೇಶದಿಂದ ಕಳಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಉಳಿದ ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ಈಜಿಫ್ಟ್ಗೆ ಕಳುಹಿಸಲು ಕ್ರಮಕೈಗೊಳ್ಳಲಾಗಿದೆ.