ನವದೆಹಲಿ: ಮೂಡಾದಲ್ಲಿ ತಮಗೂ ನಿವೇಶನವಿದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೀಡಿರುವ ಹೇಳಿಕೆ ಬಗ್ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದಿದ್ದಾರೆ.
ನವದೆಹಲಿಯಲ್ಲಿ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು; ಮೈಸೂರಿನಲ್ಲಿ ನನಗೆ ನಿವೇಶನ ಕೊಟ್ಟಿದ್ದಾರೆ ಎಂದಿದ್ದಾರೆ ಅವರಿಬ್ಬರು. ಆದರೆ, ಈವರೆಗೆ ಆ ನಿವೇಶನವನ್ನೇ ನನಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
2006ರಲ್ಲಿಯೇ ನಾನು ಸಿಎಂ ಆಗಿದ್ದೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬೇಕು ಎಂದು ನನಗೆ ಅನ್ನಿಸಿದಿದ್ದರೆ ಆಗಲೇ ಆ ನಿವೇಶನವನ್ನು ನನ್ನ ಹೆಸರಿಗೆ ಬರೆಸಿಕೊಳ್ಳಬಹುದಾಗಿತ್ತು. ಆದರೆ, ಸಿದ್ದರಾಮಯ್ಯ ಅವರಂತೆ ನಾನು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.
ಈ ನಿವೇಶನದ ಬಗ್ಗೆ ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ತನಿಖೆ ನಡೆಯುತ್ತಿದೆ. ಲೋಕಾಯುಕ್ತ, ಸಿಐಡಿ ತನಿಖೆಗಳು ನಡೆದು ಹೋಗಿವೆ. 500 ನಿವೇಶನಗಳನ್ನು ದೇವೇಗೌಡರು ಪಡೆದುಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿತ್ತು. ಕೊನೆಗೆ ತನಿಖೆಯಲ್ಲಿ ಒಂದು ನಿವೇಶನವನ್ನಷ್ಟೇ ಪಡೆದುಕೊಂಡಿದ್ದಾರೆ ಎಂದು ಗೊತ್ತಾಯಿತು ಎಂದು ಸಚಿವರು ಮಾಹಿತಿ ನೀಡಿದರು.
40 ವರ್ಷವೇ ಆಗಿದೆ, ನಿವೇಶನ ಕೊಟ್ಟಿಲ್ಲ
ಈ ನಿವೇಶನವನ್ನು ಅವರು ನನಗೆ ಧರ್ಮಕ್ಕೆ ಕೊಡುತ್ತಿಲ್ಲ. ನಾನು 34,000 ರೂ. ಹಣ ಕಟ್ಟಿದ್ದೇನೆ. ಆ ಹಣ ಕಟ್ಟಿ 40 ವರ್ಷಗಳೇ ಆಗಿದೆ. ಇದು ನಿಜವಾದ ಪರಿಸ್ಥಿತಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಇವತ್ತು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆರ್ಭಟ ನೋಡಿದೆ. ಈ ವ್ಯಕ್ತಿ ಯಾವ ಹಿನ್ನೆಲೆಯಿಂದ ಬಂದಿರುವುದು ಎನ್ನುವುದು ನನಗೆ ಗೊತ್ತಿದೆ. ಬೆಂಗಳೂರು ನಗರದಲ್ಲಿ ಈ ಮಹಾಶಯ ಏನೆಲ್ಲಾ, ಯಾವೆಲ್ಲಾ ಭ್ರಷ್ಟಾಚಾರ ಎಸಗಿದ್ದಾರೆ ಎಂದು ತೆಗೆದರೆ ಈ ವ್ಯಕ್ತಿಯ ಅಸಲಿ ಬಂಡವಾಳ ಗೊತ್ತಾಗುತ್ತದೆ. ಬೆಂಗಳೂರು ಸುತ್ತಮುತ್ತಾ ಮಾಡಿದ್ದಾರಲ್ಲ.. ಅದನ್ನಷ್ಟೇ ತೆಗೆದಿಟ್ಟರೆ ಸಾಕು ಎಂದು ಕುಮಾರಸ್ವಾಮಿ ಅವರು ಭೈರತಿ ಸುರೇಶ್ ಗೆ ತಿರುಗೇಟು ಕೊಟ್ಟರು.
ನನ್ನ ಹೆಸರಿನಲ್ಲಿರುವ ನಿವೇಶನವನ್ನು ಬೇಕಿದ್ದರೆ ನೀವೇ ನಿಮ್ಮ ಮಗನಿಗೋ ಅಥವಾ ನಿಮ್ಮ ಧರ್ಮಪತ್ನಿ ಹೆಸರಿಗೋ ಅಥವಾ ನಿಮ್ಮ ಪರಮಾಪ್ತ ಭೈರತಿ ಸುರೇಶ್ ಹೆಸರಿಗೋ ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೋ ಬರೆದುಕೊಟ್ಟುಬಿಡಿ. ನನಗೆ ಯಾವ ತಕರಾರೂ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು ಕುಮಾರಸ್ವಾಮಿ ಅವರು.