ಮಂಡ್ಯ: ನಾವು ಯಾವ ಊರಿಗೆ ಹೋದರೂ ಸಹ ಜನರು ರಸ್ತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ಇತರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನಗಳು ಬರುತ್ತಿಲ್ಲ. ಹೀಗಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಿ ಅಭಿವೃದ್ಧಿ ಯೋಜನೆಗಳಿಗೂ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಹೋದ ಕಡೆಯಲ್ಲಿ ಎಲ್ಲಾ ಜನರು ನಮಗೆ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳು ಬೇಕು ಎಂದು ಹೇಳುತ್ತಿದ್ದಾರೆ. ಮೂರು ಹೊತ್ತು ಊಟ ಮಾಡುವುದರ ಜೊತೆಗೆ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಸಹ ಅನಿವಾರ್ಯವಾಗಿದೆ ಎಂದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಬೇಕಾಗಿದೆ. ಜನರು ಗೆದ್ದು ಒಂದೂವರೆ ವರ್ಷವಾಗಿದೆ ಏನು ಕೆಲಸ ಮಾಡಿದ್ದೀರಾ ಎಂದು ಕೇಳುತ್ತಿದ್ದಾರೆ. ಜನರ ಅಭಿವೃದ್ಧಿಗೆ ಹಲವು ಇಲಾಖೆಗಳಿಂದ ಅನುದಾನಗಳು ಸಿಗುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಣ ಅವಶ್ಯಕತೆ ಇದೆ. ಸದ್ಯ ರಾಜ್ಯದ ಎಲ್ಲಾ ಆದಾಯದ ಮೂಲ ಗ್ಯಾರಂಟಿ ಯೋಜನೆಗಳಿವೆ ಹೋಗುತ್ತಿದೆ. ಹೀಗಾಗಿ ಸಮತೋಲನವಾಗಿ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡಬೇಕೆಂದು ಆಗ್ರಹಿಸಿದ್ದಾರೆ.