ಲಕ್ಸೆಂಬರ್ಗ್ (Luxembourg) ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದು. ಆದರೆ ಇಲ್ಲಿನ ಶ್ರೀಮಂತಿಕೆಯೇ ಜನರಿಗೆ ಮುಳುವಾಗಿದೆ. ಶ್ರೀಮಂತ ದೇಶವಾದ ಕಾರಣ ಲಕ್ಸೆಂಬರ್ಗ್ ನಲ್ಲಿ ವಾಸಿಸುವುದೇ ಕಷ್ಟವಾಗಿದೆ. ಇಲ್ಲಿ ಮನೆಯನ್ನು ಬಾಡಿಗೆಗೆ ಪಡೆಯುವುದಾಗಲೀ ಅಥವಾ ಮನೆಯನ್ನು ಖರೀದಿಸುವುದು ಸುಲಭ ಸಾಧ್ಯವಲ್ಲ. ಇದರಿಂದ ಅಲ್ಲಿ ವಾಸಿಸುವ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಲಕ್ಸೆಂಬರ್ಗ್ ನ ಹೆಚ್ಚಿನ ನಾಗರಿಕರು ಉದ್ಯೋಗಸ್ಥರೇ ಆಗಿರುವುದರಿಂದ ಇದು ಶ್ರೀಮಂತ ದೇಶವಾಗಿ ಹೊರಹೊಮ್ಮಿದೆ. ಐರೋಪ್ಯ ಒಕ್ಕೂಟದ ಶ್ರೀಮಂತ ವ್ಯಕ್ತಿಗಳು ಈ ದೇಶದಲ್ಲಿದ್ದಾರೆ. ಇಲ್ಲಿ ಮನೆ ಬಾಡಿಗೆ (Rent) ದುಬಾರಿಯಾಗಿದ್ದು ಜನರಿಗೆ ಅದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ಇಲ್ಲಿ ನೆಲೆಸುವ ಅರ್ಧದಷ್ಟು ಮಂದಿ ಅಲ್ಲಿನ ನಾಗರಿಕರಲ್ಲ.
ಲಕ್ಸೆಂಬರ್ಗ್ ನಲ್ಲಿ ಫ್ಲಾಟ್ ಗಳು ಪ್ರತಿ ಚದರ ಮೀಟರ್ ಗೆ 10,700 ರಿಂದ 13,000 ಯುರೋಗಳಿಗೆ ಲಭ್ಯವಿದೆ. ಇಲ್ಲಿ ಒಂದು ಮನೆಯ ಸರಾಸರಿ ವೆಚ್ಚ 1.5 ಮಿಲಿಯನ್ ಯುರೋಗಳು. ದುಬಾರಿ ಬೆಲೆಯ ಕಾರಣದಿಂದಲೇ ಅನೇಕ ಜನರಿಗೆ ಅಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ವಿಪರೀತ ಹಣದುಬ್ಬರವಾದ್ದರಿಂದ ಮನೆಯನ್ನು ಖರೀದಿಸುವದರಲ್ಲಿ ಅಥವಾ ಬಾಡಿಗೆ ಕಟ್ಟುವುದರಲ್ಲಿಯೇ ಇಡೀ ಜೀವನ ಮುಗಿದುಹೋಗುತ್ತದೆ.
ಲಕ್ಸೆಂಬರ್ಗ್ ನಲ್ಲಿ ಸುಮಾರು 6,60,000 ಜನರು ವಾಸಿಸುತ್ತಾರೆ. ಅಲ್ಲಿನ ಬಹುತೇಕ ಮಂದಿಗೆ ವಸತಿಯೇ ದೊಡ್ಡ ಸವಾಲಾಗಿದೆ. ಅಲ್ಲಿನ ಪರಿಸ್ಥಿತಿ ಹೇಗಿದೆಯೆಂದರೆ ಜನರು ಬಾಡಿಗೆಮನೆ ಖರೀದಿಸಲು ತಮ್ಮ ಇಡೀ ಜೀವನವನ್ನೇ ಅಲ್ಲಿ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆಮನೆ ಪಡೆಯಲು ಐದಾರು ವರ್ಷಗಳು ಕಾಯುವ ಪರಿಸ್ಥಿತಿ ಉಂಟಾಗುತ್ತದೆ. ಇದು ಅತ್ಯಂತ ಚಿಕ್ಕ ದೇಶವಾಗಿದ್ದರೂ ಕೂಡ ಇಲ್ಲಿನ ಜೀವನಮಟ್ಟ ದುಂಬಾ ದುಬಾರಿಯಾಗಿದೆ.
ಲಕ್ಸೆಂಬರ್ಗ್ ನಲ್ಲಿ ಎರಡು ಕೋಣೆಗಳ ಅಪಾರ್ಟ್ ಮೆಂಟ್ ಬಾಡಿಗೆ ಪಡೆಯಲು 2000 ಯುರೋ ತಗುಲುತ್ತದೆ. ಆದ್ದರಿಂದ ಅಲ್ಲಿನ ಜನರ ಆದಾಯ ಕಡಿಮೆ ಇದ್ದರೆ ಅವರಿಗೆ ವಾಸಿಸುವುದು ಸುಲಭವಲ್ಲ. ಜನರ ಕೈಗೆಟುಕುವ ದರದದಲ್ಲಿ ವಸತಿಗಳು ಸಿಗುವುದು ಅಲ್ಲಿ ವಿರಳವೇ ಆಗಿದೆ. ಅದರಲ್ಲೂ ಯುವಕರು ಮತ್ತು ಸಿಂಗಲ್ ಪೇರೆಂಟ್ಸ್ ಕುಟುಂಬಗಳು ಲಕ್ಸೆಂಬರ್ಗ್ ನಲ್ಲಿ ವಾಸಿಸುವುದು ಕಷ್ಟಕರವಾಗಿದೆ.
ಲಕ್ಸೆಂಬರ್ಗ್ ನಿವಾಸಿಗಳು ಜೀವನ ನಡೆಸಲು ನೆರೆಯ ದೇಶಗಳಿಗೆ ಹೋಗುತ್ತಿದ್ದಾರೆ. ಲಕ್ಸೆಂಬರ್ಗ್ ನಿವಾಸಿಗಳು ಅಲ್ಲಿ ವಾಸಿಸಲು ಅಸಹಾಯಕರಾಗಿದ್ದಾರೆ. ಅನೇಕ ಮಂದಿ ತಮ್ಮ ಜೀವನೋಪಾಯಕ್ಕಾಗಿ ಬೆಲ್ಜಿಯಂ ಅಥವಾ ಫ್ರಾನ್ಸ್ ಗೆ ಹೋಗುತ್ತಿದ್ದಾರೆ. ಅನೇಕ ಮಂದಿ ಪ್ರತಿದಿನ ತಮ್ಮ ದೇಶದ ಗಡಿ ದಾಟಿ ಬೇರೆ ದೇಶದಲ್ಲಿ ರಾತ್ರಿಯನ್ನು ಕಳೆಯುವಂತಾಗಿದೆ. ಲಕ್ಸೆಂಬರ್ಗ್ ತನ್ನ ಹಣಕಾಸು ಸೇವೆಗಳಿಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದೆ ಹಾಗೂ ಆರ್ಥಿಕವಾಗಿಯೂ ಸಮೃದ್ಧವಾಗಿದೆ. ಯುರೋಪಿಯನ್ ಒಕ್ಕೂಟದ ಅಂಕಿ ಅಂಶಗಳ ಪ್ರಕಾರ ಲಕ್ಸೆಂಬರ್ಗ್ ನ ಉದ್ಯೋಗಿಯ ವಾರ್ಷಿಕ ಗಳಿಗೆ ಸರಾಸರಿ 47000 ಯುರೋಗಳಷ್ಟಿದೆ. ಉಳಿದ ಅನೇಕ ದೇಶಗಳಿಗಿಂತ ಹೆಚ್ಚಿನ ಆದಾಯವಿದ್ದರೂ ಅಲ್ಲಿನ ಜನರಿಗೆ ತಮ್ಮ ದೇಶದಲ್ಲೇ ಬದುಕಲು ಸಾಧ್ಯವಾಗದೇ ಇರುವುದು ಆತಂಕಕಾರಿಯಾಗಿದೆ.