ಬೆಂಗಳೂರು: ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರು ಶೃಂಗೇರಿಯ ಮಠದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಚರ್ಚೆಯಾಗುತ್ತಿರುವ ಈ ವೇಳೆ ನಡ್ಡಾ ಅವರ ಭೇಟಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ಇದರ ಹಿಂದಿನ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೆ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ ಬಿಜೆಪಿಯನ್ನು ಬಿಡಿಸಿ, ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ ಸಜ್ಜಾಗುತ್ತಿದೆಯೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ! ಇದರ ನಂತರ ರಾಜ್ಯ ಬಿಜೆಪಿ ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸತ್ಯದ ತಲೆ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿಜೆಪಿ ಪಕ್ಷವು ಮಹಾರಾಷ್ಟ್ರದ ಪೇಶ್ವೆಗಳ ಹಿಡಿತದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಸರಿದೂಗಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿರಬೇಕು ಎಂದು ಜೆಡಿಎಸ್ ಹೇಳಿದೆ.