ಬೆಂಗಳೂರು: ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ ಎಂದು ಎಂಎಲ್ಸಿ ಎನ್.ರವಿಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಮೇ 28ರಂದು ನವದೆಹಲಿಯಲ್ಲಿ ನೂತನ ಸಂಸತ್ ಭವನವನ್ನು ಕೇಂದ್ರ ಸರ್ಕಾರವು ಉದ್ಘಾಟನೆ ಮಾಡುತ್ತಿದೆ.
ಆದರೆ, ರಾಷ್ಟ್ರಪತಿಯವರನ್ನು ಆಹ್ವಾನಿಸಿಲ್ಲವೆಂದು ಆರೋಪ ಮಾಡುತ್ತಾ ಕಾಂಗ್ರೆಸ್ ಸೇರಿ ಕೆಲ ವಿರೋಧ ಪಕ್ಷಗಳು ರಾಜಕೀಯ ದ್ವೇಷ ಸಾಧಿಸುತ್ತಿರುವುದು ಸರಿಯಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದರು. ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ ಅವರ ಜನ್ಮದಿನದಂದು ನೂತನ ಸಂಸತ್ ಉದ್ಘಾಟನೆಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಸ್ವಾತಂತ್ರ್ಯ ನಂತರ ಭಾರತದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಹಲವು ನಾಯಕರು ಸಂಸತ್ತಿನಲ್ಲಿ ಕುಳಿತು ದೇಶವನ್ನು ಮುನ್ನಡೆಸಬೇಕಿತ್ತು, ವಿಪರ್ಯಾಸವೆಂದರೆ ನೆಹರು ಕುಟುಂಬಸ್ಥರು ಇಡೀ ದೇಶವನ್ನೇ ತಮ್ಮ ಕುಟುಂಬದ ಸುಪರ್ದಿಗೆ ನೀಡುವ ಮೂಲಕ ಸಂಸತ್ತನ್ನು ತಮ್ಮ ಕುಟುಂಬಕ್ಕೆ ಸೀಮಿತ ಮಾಡಿಬಿಟ್ಟರು ಎಂದು ಕಿಡಿ ಕಾರಿದ್ದಾರೆ.