ಬೆಂಗಳೂರು: ಬೆಂಗಳೂರು ಹೆಸರು ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಯಂಡಹಳ್ಳಿ ವಾರ್ಡ್ನ ಪಂತರಪಾಳ್ಯಯಲ್ಲಿ ನಿರ್ಮಿಸಿರುವ ಡಾ. ಪುನೀತ್ ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ ಕೆರೆ ಲೋಕಾರ್ಪಣೆಗೊಳಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು.
ಬೆಂಗಳೂರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ಉಳಿದ ರಾಜ್ಯಗಳ ನಗರಗಳಿಂತ ವೇಗವಾಗಿ ಅಭಿವೃದ್ಧಿಯಾಗಿದೆ. ಪ್ರತಿ ದಿನ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐದು ಸಾವಿರ ವಿಜ್ಞಾನಿಗಳು ಬರುತ್ತಾರೆ ಹೋಗುತ್ತಾರೆ.
ಹಾಗೇ ಪ್ರತಿ ದಿನ 5000 ವಾಹನಗಳು ರಸ್ತೆಗಿಳಿಯುತ್ತವೆ. ಸುಮಾರು 400 ಆರ್ ಆಂಡ್ ಡಿ ಕೇಂದ್ರಗಳಿವೆ. ಸೇಫ್ ಸಿಟಿ ಯೋಜನೆ ಅಡಿಯಲ್ಲಿ 7000 ಸಿಸಿ ಕ್ಯಾಮರಾಗಳನ್ನು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಕ್ಯಾಮರಾ ಅಳವಡಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಏಕೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ಅಭಿವೃದ್ಧಿಗೊಂಡಿದೆ. ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹೆಸರು ಉಳಿಸುವುದು ನಮ್ಮ ಕರ್ತವ್ಯ. ರಾಜ್ಯಕ್ಕೆ ಅತಿ ಹೆಚ್ಚು ಆದಾಯ ತರುವ ಊರು ಬೆಂಗಳೂರಿನ ಬ್ರ್ಯಾಂಡ್ ಉಳಿಸಲು ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು. ಬೆಂಗಳೂರು ನಮ್ಮ ಹೆಮ್ಮೆ, ಪ್ರತಿಷ್ಠೆ, ಗೌರವ ಎಂದು ಸಿಎಂ ಬೊಮ್ಮಾಯಿ ಹೇಳಿದರು.