ಬೆಂಗಳೂರು: ಹಸಿದವರಿಗೆ ಅನ್ನ ನೀಡದ ಸರ್ಕಾರ ಜನದ್ರೋಹಿ ಸರ್ಕಾರವೆಂದು ಕರೆಸಿಕೊಳ್ಳುತ್ತದೆ ಎಂದು ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪರೋಕ್ಷವಾಗಿ ಕೇಂದ್ರ ಸರ್ಕಾರದ (Union Government) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ. ಸರ್ಕಾರ ಆಧುನಿಕ ಕರ್ನಾಟಕ ನಿರ್ಮಾಣ ಮಾಡಲು ಉದ್ದೇಶಿಸಿದೆ. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧ. ಶಿಕ್ಷಣ ಜತೆಗೆ ಮಕ್ಕಳ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನಾವು ಸಿದ್ಧರಾಗಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತೆ. ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ ಸೇವೆ ಒದಗಿಸಲು ನೆರವು ಎಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣದಲ್ಲಿ ತಿಳಿಸಿದರು.
ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, 10 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ. ಸೋಮವಾರ ಅಧಿವೇಶನಕ್ಕೆ ಹಾಜರಾದ ರಾಜಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಹೂಗುಚ್ಛ ನೀಡಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ವಾಗತಿಸಿದರು. ಈ ವೇಳೆ ಕಾನೂನು ಮಂತ್ರಿ ಹೆಚ್.ಕೆ ಪಾಟೀಲ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ನಂತರ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಮಾತನಾಡಿದರು.