ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಜಿಆರ್ ಫಾರ್ಮ್ ಹೌಸ್ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಹಲವು ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿದ್ದು, ಅದರಲ್ಲಿ ಪ್ರಮುಖವಾಗಿರುವುದು ತೆಲುಗು ನಟಿ ಹೇಮಾ ಅವರದ್ದು.
ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ವಿಡಯೋ ಮಾಡಿದ ನಟಿ ತಾವು ಹೈದರಾಬಾದ್ನ ಫಾರ್ಮ್ಹೌಸ್ನಲ್ಲಿ ಇರೋದಾಗಿ ಸುಳ್ಳು ವಿಡಿಯೋ ಮಾಡಿದ್ದರು. ಅವರು ಕೂಡ ಪಾರ್ಟಿಯಲ್ಲಿ ಇದ್ದರು ಎನ್ನುವ ವಿವಾರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅವರ ಅಸಲಿ ಮುಖ ಬಯಲಿಗೆ ಎಳೆದಿದ್ದಾರೆ.
‘ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು ಸತ್ಯ’ ಎಂದು ಪೊಲೀಸ್ ಆಯುಕ್ತ ದಯಾನಂದ್ ಕ್ಲ್ಯಾರಿಟಿ ನೀಡಿದ್ದಾರೆ. ಇದೇ ವೇಳೆ ಫಾರ್ಮ್ ಹೌಸ್ನಲ್ಲೇ ನಟಿ ವಿಡಿಯೋ ಮಾಡಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಕರಣದ ಕುರಿತು ದಯಾನಂದ್ ಮಾತನಾಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ದಯಾನಂದ್ ಹೇಳಿದ್ದಾರೆ. ಸದ್ಯ ಹೇಮಾ ಅವರ ರಕ್ತದ ಮಾದರಿ ತೆಗೆದುಕೊಂಡು ಅವರನ್ನು ಕಳುಹಿಸಲಾಗಿದೆ. ಮೆಡಿಕಲ್ ಟೆಸ್ಟ್ ಬಳಿಕ ಸ್ಟೇಷನ್ ಬೇಲ್ ಮೇಲೆ ಹೇಮಾರನ್ನು ಬಿಡುಗಡೆ ಮಾಡಲಾಗಿದೆ ಎಂದು ದಯಾನಂದ್ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್ನಲ್ಲಿ ಮೇ 19ರ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿತ್ತು. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು. ಈ ರೇವ್ ಪಾರ್ಟಿಯಲ್ಲಿ ನಾನು ಇರಲಿಲ್ಲ ಎಂದು ಸುಳ್ಳು ಹೇಳಿದ್ದ ನಟಿ ಹೇಮಾ ಬಗ್ಗೆ ಅಸಲಿ ವಿಚಾರ ಇದೀಗ ಬಯಲಾಗಿದೆ.