ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆದಿಲ್ಲ, ಹತ್ತು ಆಡಿಯೋ ಬಿಡುಗಡೆ ಮಾಡಿದರೂ ಹೆದರಲ್ಲ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇವತ್ತು ನನ್ನ ಮೇಲೆ, ಮುಖ್ಯಮಂತ್ರಿಯವರ ಮೇಲೆ ಹಾಗೂ ನಮ್ಮ ರಾಷ್ಟ್ರೀಯ ಮುಖಂಡರ ಮೇಲೆ ಆರೋಪ ಮಾಡಿದ್ದಾರೆ.
ಇದನ್ನು ನೋಡಿದರೆ ಕಾಂಗ್ರೆಸ್ ಇವತ್ತು ಬಹಳ ಶೋಚನೀಯ ಸ್ಥಿತಿಗೆ ಬಂದು ತಲುಪಿದಂತಿದೆ ಎಂದು ಟೀಕಿಸಿದರು. ಕೇನ್ ರಿಸೋರ್ಸ್ ಕಂಪನಿಗೆ ಟೆಂಡರ್ ನೀಡಲು ನಮ್ಮ ಇಲಾಖೆಗೆ ಸಿಎಂ ಆಗಲೀ, ಅವರ ಮನೆಯವರಾಗಲೀ ಅಥವಾ ಇನ್ಯಾರೂ ಕೂಡಾ ನಮಗೆ ಒತ್ತಡ ಹಾಕಿಲ್ಲ. ನಿಯಮದ ಪ್ರಕಾರವೇ ಟೆಂಡರ್ ನೀಡಿದ್ದೇವೆ. ಚುನಾವಣೆ ಸಮಯದಲ್ಲಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ.
ನಿಮ್ಮ ಬಳಿ ದಾಖಲೆ ಇದ್ದರೆ ನೀಡಿ, ಇಂತಹ ಹತ್ತು ಆಡಿಯೋ ಬಿಡುಗಡೆ ಮಾಡಿದರೂ ನಾನು ಹೆದರೋದಿಲ್ಲ. ಯಾರೋ ನನ್ನ ಬಳಿ ಬರೋದಕ್ಕೆ ಪ್ರಯತ್ನ ಮಾಡಿದ್ದರು. ಆದರೆ ನಾನು ಅದಕ್ಕೆ ಸೊಪ್ಪು ಹಾಕಿಲ್ಲ. ಹೀಗಾಗಿ ಈಗ ಸುಳ್ಳು ಆರೋಪ ಮಾಡಿದ್ದಾರೆ ಎಂದರು. ಚುನಾವಣೆ ಸಂದರ್ಭದಲ್ಲಿ ಯಾರೋ ದಾರಿಯಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆ ಮಾಡಿದ್ದಾರೆ. ದಾಖಲೆ ಇದ್ದರೆ ತೆಗೆದುಕೊಂಡು ಬನ್ನಿ, ಸಿಎಂ ಮೇಲೆ ಆರೋಪ ಮಾಡುವುದು ತಪ್ಪು, ಸಿಎಂ ಜೊತೆಗೆ ಕೇಂದ್ರ ಸಚಿವರ ಮೇಲೆ ಪ್ರಿಯಾಂಕ್ ಖರ್ಗೆ ಆರೋಪ ಮಾಡಿರುವುದು ದುರದೃಷ್ಟಕರ. ರಫ್ತು ಮಾಡುವ ಸಂದರ್ಭದಲ್ಲಿ ಯಾವುದೇ ಟ್ಯಾಕ್ಸ್ ಬಂದರೂ ಅದು ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಎಂದು ಕಾಕಂಬಿ ರಫ್ತಿಗೆ ಅವಕಾಶ ಕೊಡುವ ಮೂಲಕ ಅಬಕಾರಿ ಇಲಾಖೆಯಲ್ಲಿ 200 ಕೋಟಿ ಅಕ್ರಮ ಮಾಡಲಾಗಿದೆ ಎನ್ನುವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಸ್ಪಷ್ಟೀಕರಣ ನೀಡಿದರು.