ಪನಾಮಾ ಸಿಟಿ: ‘ಭಾರತದ ವಿರುದ್ಧ ಗಡಿಯಾಚೆ ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದು ಬಹಳ ಕಷ್ಟ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ( Minister S. Jaishankar)ಹೇಳಿದ್ದಾರೆ. ಪನಾಮಾದ ವಿದೇಶಾಂಗ ಸಚಿವೆ ಜನೈನ ತೆವಾನೇ ಮೆನ್ಕೋಮೋ ಅವರೊಡನೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈ ಶಂಕರ್,
‘ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವ ಪಾಕಿಸ್ತಾನದೊಂದಿಗೆ ಮಾತುಕತೆ (Talks with Pakistan)ನಡೆಸುವುದು ಬಹಳ ಕಷ್ಟ. ಗಡಿಯಾಚೆಗಿನ ಭಯೋತ್ಪಾದನೆ ಚಟುವಟಿಕೆಯನ್ನು ಪ್ರೋತ್ಸಾಹಿಸುವುದು, ಪ್ರಾಯೋಜಿಸುವುದು ಮತ್ತು ನಡೆಸುವುದನ್ನು ಅವರು ನಿಲ್ಲಿಸಬೇಕೆಂದು ನಾವು ಯಾವಾಗಲೂ ಹೇಳುತ್ತೇವೆ. ಮುಂದೊಂದು ದಿನ ಪಾಕಿಸ್ತಾನವು ಇಂಥ ಚಟುವಟಿಕೆಗಳನ್ನು ನಿಲ್ಲಿಸುತ್ತದೆ ಎಂದು ನಾವು ಆಶಿಸುತ್ತೇವೆ ಎಂದು ಹೇಳಿದರು.
ಅಂತೆಯೇ ಪಾಕಿಸ್ತಾನದೊಂದಿಗೆ ನಾವು ಉತ್ತಮ ನೆರೆಯ ಸಂಬಂಧ ಬಯಸುತ್ತೇವೆ. ಆದರೆ ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ್ದಾಗಿದೆ ಎಂದು ಭಾರತ ಯಾವಾಗಲೂ ಹೇಳುತ್ತಾ ಬಂದಿದೆ. ನಾವಿಬ್ಬರೂ (ಭಾರತ ಮತ್ತು ಪಾಕಿಸ್ತಾನ) ಎಸ್ಸಿಒದ ಸದಸ್ಯ ರಾಷ್ಟ್ರಗಳು. ಆದ್ದರಿಂದ ಸಭೆಗಳಿಗೆ ನಾವು ಸಾಮಾನ್ಯವಾಗಿ ಹಾಜರಾಗುತ್ತೇವೆ. ಈ ಬಾರಿಯ ಎಸ್ಸಿಒದ ಅಧ್ಯಕ್ಷತೆ ನಮಗೆ ಸಿಕ್ಕಿದೆ. ಆದ್ದರಿಂದ ಈ ಶೃಂಗಸಭೆ ಭಾರತದಲ್ಲಿ ನಡೆಯುತ್ತಿದೆ ಎಂದರು.