ಚಾಮರಾಜನಗರ: ಬಿಜೆಪಿ(BJP) ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ ಮಾಲೀಕತ್ವದ ಬೈಕ್ ಶೋ ರೂಂ(Bike Showroom) ಗೆ ಇಂದು(ಏ.19) ದಿಢೀರನೆ ಏಕಾಏಕಿ ಐಟಿ ಅಧಿಕಾರಿಗಳು ದಾಳಿ(IT Raid)ಮಾಡಿದ್ದಾರೆ. ಮೂರು ವಾಹನಗಳಲ್ಲಿ ಬಂದಿರುವ ಅಧಿಕಾರಿಗಳು, ಆಸ್ತಿ ವಿವರದ ಮಾಹಿತಿ ತೆಗೆದುಕೊಂಡು ಕಚೇರಿಗೆ ಬರುವಂತೆ ವೃಷಬೇಂದ್ರಪ್ಪ ಅವರಿಗೆ ಸೂಚನೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಹೆಚ್ಚು ಜನರು ಶೋ ರೂಂ ಗೆ ಭೇಟಿ ನೀಡಿದ್ದರು ಎಂದು ದೂರು ನೀಡಲಾಗಿದ್ದು, ಸದ್ಯ ಈ ಕಾರಣದಿಂದಲೇ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಚಾಮರಾಜನಗರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಉದ್ಯಮಿ ವೃಷಬೇಂದ್ರಪ್ಪ
ಇನ್ನು ಉದ್ಯಮಿಯಾಗಿರುವ ವೃಷಬೇಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಚಾಮರಾಜನಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೂಡ ಆಗಿದ್ದರು. ಸದ್ಯ ಇವರಿಗೆ ಎಲ್ಲಾ ಆಸ್ತಿ ವಿವರದ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಶೋ ರೂಂ ಪರಿಶೀಲನೆ ಮಾಡಿ ಇದೀಗ ಅಧಿಕಾರಿಗಳು ತೆರೆಳಿದ್ದಾರೆ.
ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ
ಬೆಂಗಳೂರು: ಐಟಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದು ಪದೇ ಪದೇ ದಾಳಿ ನಡೆಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಂಗಳೂರು, ಮೈಸೂರು ಸೇರಿದಂತೆ ಕೆಲ ಕಡೆ ಕಾಂಗ್ರೆಸ್ ಮುಖಂಡರುಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈಗ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್ ಬಾಬು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ 50 ಕಡೆ ಹಲವಾರು ಕಾಂಗ್ರೆಸ್ ನಾಯಕರ ನಿವಾಸದ ಮೇಲೆ ದಾಳಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಕೆಜಿಎಫ್ ಬಾಬು ಚಿಕ್ಕಪೇಟೆ ಕ್ಷೇತ್ರದ ಸ್ಪರ್ಧಿ
ಇಂದು(ಏಪ್ರಿಲ್ 19) ಮುಂಜಾನೆಯಿಂದಲೇ ಹೈಗ್ರೌಂಡ್ಸ್ ಬಳಿಯಿರುವ ಕೆಜಿಎಫ್ ಬಾಬು ನಿವಾಸ ರುಕ್ಸಾನಾ ಪ್ಯಾಲೇಸ್ನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಪೇಟೆ ಅಸೆಂಬ್ಲಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಬಯಸಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಜಿಎಫ್ ಬಾಬು, ಕ್ಷೇತ್ರದಲ್ಲಿ ಅನೇಕ ಸಾಮಾಜ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಬಾಬುಗೆ ಟಿಕೆಟ್ ನೀಡಲಿಲ್ಲ. ಹಾಗಾಗಿ ಬಾಬು ಅವರು ತಮ್ಮ ಪತ್ನಿಯನ್ನು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ ಎಂಬುದು ಗಮನಾರ್ಹ.