ಚಿತ್ರದುರ್ಗ: ‘ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಪಾತ್ರ ವಹಿಸಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿಎಂ ಸಿದ್ದರಾಮಯ್ಯ ಮುಡಾ ಹಗರಣವನ್ನು ಸಿಬಿಐಗೆ ಯಾಕೆ ಕೊಡ್ಬೇಕು ಅಂತಾರೆ.
2013ರ ಅಫಿಡವಿಟ್ನಲ್ಲಿ ಈ ಆಸ್ತಿ ಬಗ್ಗೆ ತೋರಿಸಿಲ್ಲ, ಆಮೇಲೆ 25 ಲಕ್ಷ ಇದ್ದಿದ್ದು 25 ಕೋಟಿ ಆಸ್ತಿ ತೋರಿಸಿದ್ದಾರೆ. ಅದು ಹೇಗೆ ಬಂತು’ ಎಂದು ಪ್ರಶ್ನಿಸಿದರು.
ಇದುವರೆಗೂ ನಾಗೇಂದ್ರ, ದದ್ದಲ್ ಮೇಲೆ ಎಫ್ಐಆರ್ ಆಗಿಲ್ಲ? ಚಂದ್ರಶೇಖರ್ ಡೆತ್ ನೋಟ್ನಲ್ಲಿ ಎಲ್ಲಾ ಉಲ್ಲೇಖ ಇದೆ, ಸಚಿವರ ಮೌಖಿಕ ಆದೇಶದ ಮೇರೆಗೆ ಹಣ ವರ್ಗಾವಣೆ ಆಗಿದೆ ಅಂತ ಬರೆದಿದ್ದಾರೆ. ಬಳ್ಳಾರಿ, ತೆಲಂಗಾಣ ಎಲೆಕ್ಷನ್ನಲ್ಲಿ ಹಣ ಖರ್ಚಾಗಿದೆ, ಇದನ್ನು ದಪ್ಪ ಚರ್ಮದ, ಲಜ್ಜೆಗೆಟ್ಟತನದ ಸರಕಾರ ಅಂತ ಹೇಳಬೇಕು ಎಂದರು.
ರಾಮನಗರ ಜಿಲ್ಲೆಯ ಹೆಸರು ಮರು ನಾಮಕರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಶಿ, ಕಾಂಗ್ರೆಸ್ನವರಿಗೆ ರಾಮನ ಹೆಸರು ಕಂಡರೆ ಅಲರ್ಜಿ. ರಾಮನ ವಿಷಯ ಬಂದಾಗ ಅಲರ್ಜಿ ಆಗುತ್ತೆ, ಅದಕ್ಕೆ ಈ ರೀತಿಯಾದ ಕೆಲಸಗಳಿಗೆ ಕೈ ಹಾಕ್ತಾರೆ, ಮುಂದಿನ ದಿನಗಳಲ್ಲಿ ಅದಕ್ಕೆ ಜನ ತಕ್ಕ ಉತ್ತರ ಕೊಡ್ತಾರೆ ಎಂದರು.