ಇಟಲಿ: ಇಟಲಿ ಸರ್ಕಾರವು ಇಟಾಲಿಯನ್ ಭಾಷೆಯೇ ಸಾರ್ವಭೌಮ ಎಂಬುದನ್ನು ಜಾರಿಗೆ ತರುವ ಮೂಲಕ ಇಂಗ್ಲಿಷ್ ಭಾಷೆ ಬಳಕೆಯ ನಿಷೇಧಕ್ಕೆ ಮುಂದಾಗಿದೆ.
ದೇಶದಲ್ಲಿ ವಿದೇಶಿ ಭಾಷೆ ಬಳಕೆ, ಅದರಲ್ಲೂ ಇಂಗ್ಲಿಷ್ ಭಾಷೆಯ ಬಳಕೆಯನ್ನು ನಿಯಂತ್ರಿಸುವ ದಿಸೆಯಲ್ಲಿ ಮಹತ್ವದ ಕರಡು ವಿಧೇಯಕವೊಂದನ್ನು ಮಂಡಿಸಲು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮುಂದಾಗಿದ್ದಾರೆ.
ಇದೀಗ ಸರ್ಕಾರಿ ಅಥವಾ ಖಾಸಗಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದರೆ ಅವರಿಗೆ 1.08 ಲಕ್ಷ ಡಾಲರ್ (ಸುಮಾರು 89 ಲಕ್ಷ ರೂಪಾಯಿ) ದಂಡ ವಿಧಿಸುವ ಕ್ರಮವೂ ವಿಧೇಯಕದಲ್ಲಿದೆ. ಆ ಮೂಲಕ ದೇಶದಲ್ಲಿ ಇಟಲಿಯಲ್ಲಿಯೇ ಜನ ವ್ಯವಹರಿಸುವಂತೆ ಮಾಡುವುದು ಮೆಲೋನಿ ಅವರ ಉದ್ದೇಶವಾಗಿದೆ.
ಈಗಾಗಲೇ ಇಂಗ್ಲಿಷ್ ಬಳಕೆಯ ನಿಷೇಧದ ಕುರಿತು ವಿಧೇಯಕದ ಕರಡು ಪ್ರತಿ ಸಿದ್ಧವಾಗಿದೆ. ವಿಧೇಯಕದ ಅಂತಿಮ ಪ್ರತಿ ಸಿದ್ಧವಾಗಿ, ಅದನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಅಂಗೀಕಾರ ಪಡೆದ ನಂತರ ಕಾನೂನು ಜಾರಿಗೆ ಬರಲಿದೆ.
ಎಲ್ಲರೂ ಇಟಾಲಿಯನ್ ಭಾಷೆಯಲ್ಲಿಯೇ ಮಾತನಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು ಎಂಬದು ಮೆಲೋನಿ ಅವರ ಉದ್ದೇಶವಾಗಿದ್ದು, ಇದು ಈ ದೇಶದ ಭಾಷೆಯ ಅಭಿಮಾನದ ಸಂಕೇತವೂ ಆಗಿದೆ.