ರೋಮ್ : ಇಟಲಿಯ ದಕ್ಷಿಣದಲ್ಲಿರುವ ಸಿಸಿಲಿ ಕಡಲತೀರದ ಬಳಿ ಸಮುದ್ರದ ನೀರಿನಲ್ಲಿ ತೇಲುತ್ತಿದ್ದ 5.3 ಟನ್ ಗಳಷ್ಟುಮಾದಕ ಪದಾರ್ಥ ಕೊಕೇನ್ ಅನ್ನು ವಶಕ್ಕೆ ಪಡೆಯಲಾಗಿದ್ದು ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಇಟಲಿಯ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಅಮೆರಿಕಾದಿಂದ ಪ್ರಯಾಣ ಆರಂಭಿಸಿರುವ ಹಡಗು ಸಿಸಿಲಿ ಕಡಲ ತೀರ ಸಮೀಪಿಸುತ್ತಿರುವಂತೆಯೇ ಹಡಗಿನಿಂದ ಪ್ಯಾಕೆಟ್ ಗಳನ್ನು ನೀರಿಗೆ ಎಸೆಯುತ್ತಿರುವ ಬಗ್ಗೆ ಕಣ್ಗಾವಲು ವಿಮಾನವು ಇಟಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಅದರಂತೆ ಪೊಲೀಸರು ದೋಣಿಯಲ್ಲಿ ಆ ಸ್ಥಳದತ್ತ ಹೋದಾಗ ನೀರಿನಲ್ಲಿ ತೇಲುತ್ತಿದ್ದ ಪ್ಯಾಕೆಟ್ ಗಳನ್ನು ಮೀನುಗಾರಿಕೆಯ ಟ್ರಾಲರ್ ಬೋಟ್ ನವರು ಬಲೆ ಬಳಸಿ ಹಿಡಿಯುತ್ತಿದ್ದರು. ಈ ಪ್ಯಾಕೆಟ್ ಗಳನ್ನು ಟ್ರಾಲರ್ ಬೋಟ್ ನಲ್ಲಿದ್ದ ರಹಸ್ಯ ಕಂಪಾರ್ಟ್ ಮೆಂಟ್ ನಲ್ಲಿ ಇಡಲಾಗಿದ್ದು, ಇದರ ಒಟ್ಟು ಮೌಲ್ಯ 946 ದಶಲಕ್ಷ ಡಾಲರ್ಗಳಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.