ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಜೈಲು ಸೇರಿರುವ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿರುವ ಫೋಟೋ ವೈರಲ್ ಆಗಿದ್ದು ಇದು ಸರ್ಕಾರಕ್ಕೆ ಮುಜುಗರ ತಂದೊಡ್ಡಿದೆ. ಪ್ರಕರಣ ಸಂಬಂಧ ಈಗಾಗಲೇ 7 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಿಲಾಗಿದೆ. ಇದೀಗ ಘಟನೆಯ ಕುರಿತು ನಟ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ.
‘ದರ್ಶನ್ ನಮಗೆ ಆಪ್ತರು. ನಾನು ಮಾತನಾಡಿದರೆ ವಿವಾದ ಆಗುತ್ತೆ, ಆದರೆ ಎಲ್ಲರಿಗೂ ಗೊತ್ತಿರುವ ವಿಚಾರವೆಂದರೆ, ಜೈಲಲ್ಲಿ ಹೀಗೆ ನಡೆಯುತ್ತಿರುವುದು ಇದು ಮೊದಲಾ? ಈಗ ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಮಾಡುತ್ತಿರುವ ಮಾಧ್ಯಮಗಳು ಈ ಮುಂಚೆ ಏಕೆ ಕೇಳಲಿಲ್ಲ?’ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, ‘ಐಪಿಎಸ್ ಅಧಿಕಾರಿ ರೂಪಾ ಅವರು ಈ ಮೊದಲು ಸಹ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರಗಳನ್ನು ಬಯಲು ಮಾಡಿದ್ದರು. ಆಗ ನೀವು ಸಹ ಪ್ರಶ್ನೆ ಮಾಡಿರಲಿಲ್ಲ ಏಕೆ?’ ಎಂದು ಮಾಧ್ಯಮಗಳನ್ನು ಸುಮಲತಾ ಪ್ರಶ್ನೆ ಮಾಡಿದರು.
‘ಯಾರೇ ಜೈಲಿನಲ್ಲಿ ಬಂಧಿಗಳಿದ್ದರೂ ಸ್ವಲ್ಪ ಹಣ ಖರ್ಚು ಮಾಡಿದರೆ ಎಲ್ಲವೂ ಸಿಗುತ್ತದೆ, ಪರಪ್ಪನ ಅಗ್ರಹಾರ ಮಾತ್ರವಲ್ಲ, ಪ್ರತಿ ಜೈಲಿನಲ್ಲಿಯೂ ಇದು ನಡೆಯುತ್ತಿದೆ. ಇದು ಗುಟ್ಟೇನೂ ಅಲ್ಲ. ಅಮೆರಿಕ ಜೈಲಿನಲ್ಲಿ, ಮೊಬೈಲ್ ಫೋನ್, ಸಿಗರೇಟು, ಡ್ರಗ್ಸ್ ಸಹ ಸಿಗುತ್ತೆ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘ಈಗ ನಡೆದಿರುವುದು ಸರಿಯಲ್ಲ, ಆದರೆ ಇದು ಭ್ರಷ್ಟಾಚಾರ. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವಿದು. ಆದರೆ ನೀವು (ಮಾಧ್ಯಮಗಳು) ಒಬ್ಬ ವ್ಯಕ್ತಿಯನ್ನು ಯಾಕೆ ಗುರಿ ಮಾಡಿಕೊಳ್ಳುತ್ತಿದ್ದೀರಿ? ಪ್ರಶ್ನೆ ಮಾಡಬೇಕಿರುವುದು, ಜೈಲಿನ ಅಧಿಕಾರಿಗಳನ್ನು, ಇಲಾಖೆಯನ್ನು, ಜೈಲು ವ್ಯವಸ್ಥೆಯನ್ನು ಸರಿಮಾಡಬೇಕಾದುದು ಸಚಿವಾಲಯ ಜವಾಬ್ದಾರಿ’ ಎಂದು ಸಹ ಸುಮಲತಾ ಹೇಳಿದ್ದಾರೆ.
ಜೈಲಿನಲ್ಲಿ ಕೆಲವು ರೌಡಿಶೀಟರ್ಗಳ ಜೊತೆಗೆ ದರ್ಶನ್ ಒಡನಾಟ ಹೊಂದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸುಮಲತಾ, ಜೈಲಿನಲ್ಲಿ ಒಳ್ಳೆಯವರು ಇರಲು ಸಾಧ್ಯವಾ? ಇರೋರೆಲ್ಲ ಕೆಟ್ಟವರೇ ಅಲ್ಲವ? ಇನ್ಯಾರನ್ನು ಅವರು ಮಾತನಾಡಿಸಬೇಕು? ಹಾಗಿದ್ದರೆ, ನಿಮ್ಮ ಪ್ರಕಾರ ಯಾರನ್ನೂ ಮಾತನಾಡಿಸಬಾರದಾ?’ ಎಂದು ಸುಮಲತಾ ಪ್ರಶ್ನೆ ಮಾಡಿದರು.