ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡುತ್ತಿದೆ. ಬಿಜೆಪಿಯ ಲೂಟಿ, ಕಮೀಷನ್ ಮುಕ್ತವಾದ ಸರ್ಕಾರಕ್ಕಾಗಿ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಮನವಿ ಮಾಡಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯಕ್ಕೆ ಇನ್ನೆರಡೇ ದಿನ ಬಾಕಿ ಎನ್ನುವಾಗ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿ ಅವರು, ಇಂದಿರಾ ಗಾಂಧಿ ಅವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈ ಹಿಡಿಸಿದ್ದರು. 24 ವರ್ಷಗಳ ಹಿಂದೆ ಬಳ್ಳಾರಿ ಜನರು ನನಗೆ ಬೆಂಬಲಿಸಿದ್ದರು ಎಂದು ಸ್ಮರಿಸಿದರು. ಈಗ ರಾಜ್ಯದಲ್ಲಿ ಬಿಜೆಪಿಯ ಲೂಟಿ, ಕಮೀಷನ್ ಮುಕ್ತವಾದ ಸರ್ಕಾರಕ್ಕಾಗಿ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ ಅವರು ಸಹೋದರ ಸಹೋದರಿಯರಿಗೆ ನಮಸ್ಕಾರ ಎಂದು ಭಾಷಣ ಪ್ರಾರಂಭ ಮಾಡಿದರು. ಬಳಿಕ ರಾಜ್ಯದ ಭವಿಷ್ಯ ಇನ್ನುಮುಂದೆ ಬದಲಾಗಲಿದೆ ಅನ್ನೋ ವಿಶ್ವಾಸವಿದೆ. ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ. ದೇಶದಲ್ಲಿ ದ್ವೇಷ ಹರಡುವವರ ವಿರುದ್ಧ ಭಾರತ್ ಜೋಡೋ ಯಾತ್ರೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ತೊಲಗಿಸುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯವರು ದರೋಡೆಯೆ ದಂಧೆಯಾಗಿ ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಸರ್ಕಾರಕ್ಕೆ ಸೊಕ್ಕು ಬಂದಿದ್ದು ಜನರ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದು ಕಿಡಿಕಾರಿದರು.
ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಜೇಬಲ್ಲಿವೆ ಎಂದು ಭಾವಿಸುತ್ತಾರೆ. ಪ್ರಜಾಪ್ರಭುತ್ವ ಹೀಗೆ ನಡೆಯುತ್ತಾ? ಇವರು ಧಮ್ಕಿ ಹಾಕುತ್ತಾರೆ. ಬಿಜೆಪಿ ಸೋತರೆ ಜಗಳವಾಗುತ್ತೆ, ಮೋದಿ ಆಶಿರ್ವಾದ ಸಿಗಲ್ಲಾ ಅಂತಾರೆ. ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ. ಕರ್ನಾಟಕದ ಜನರು ಯಾರದೋ ಆಶಿರ್ವಾದ ಬಯಸಲ್ಲಾ. ಇಲ್ಲಿನ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ. ಕರ್ನಾಟಕದ ಜನರು ಯಾರಿಗೂ ಹೆದರಲ್ಲಾ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.