ಜೈಪುರ: ಬಿಜೆಪಿ ಹಾಗೂ ಆರ್ಎಸ್ಎಸ್ ಹಿಂದೂ ರಾಷ್ಟ್ರದ ಬಗ್ಗೆ ಪದೇ ಪದೇ ಉಲ್ಲೇಖಿಸುತ್ತಿರುವ ಹಿನ್ನೆಲೆಯಲ್ಲಿ ಅಮೃತಪಾಲ್ ಸಿಂಗ್ ಖಲಿಸ್ತಾನದ ಬಗ್ಗೆ ಮಾತನಾಡಲು ಧೈರ್ಯ ಮಾಡಿದ್ದಾನೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ನಲ್ಲಿ ಸಿಖ್ ಮೂಲಭೂತವಾದಿ ಪ್ರಚಾರಕ ಅಮೃತ್ಪಾಲ್ ಎಂಬ ಹೊಸ ಹೆಸರು ಹುಟ್ಟಿಕೊಂಡಿದೆ. ಮೋಹನ್ ಭಾಗವತ್ ಹಾಗೂ ನರೇಂದ್ರ ಮೋದಿ ಅವರು ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡಬಹುದಾದರೆ, ನಾನು ಖಲಿಸ್ತಾನ್ ಬಗ್ಗೆ ಯಾಕೆ ಮಾತನಾಡಬಾರದು? ನಿಮ್ಮ ಮಾತನ್ನು ಕೇಳಿ ಧೈರ್ಯ ಬಂದಿದೆ ಎಂದು ಅಮೃತ್ಪಾಲ್ ಹೇಳಿದ್ದಾನೆ ಎಂದು ಕಿಡಿಕಾರಿದರು.
ಬೆಂಕಿ ಹಚ್ಚುವುದು ಸುಲಭ. ಆದರೆ ಅದನ್ನು ನಂದಿಸಲು ಸಮಯ ಹಿಡಿಯುತ್ತದೆ. ಇದು ದೇಶದಲ್ಲಿ ಮೊದಲ ಬಾರಿಗೆ ಆಗುತ್ತಿಲ್ಲ. ಇದರಿಂದಲೇ ಇಂದಿರಾಗಾಂಧಿ ಅವರು ಹತ್ಯೆಯಾದರು. ಇಂದು ದೇಶದಲ್ಲಿ ಧರ್ಮ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದರು. ದೇಶದಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಆದರೆ ದೇಶದ ಒಳಿತಿಗಾಗಿ ಎಲ್ಲ ಧರ್ಮ, ಜಾತಿಗೆ ಸೇರಿದವರನ್ನು ಜೊತೆಯಲ್ಲಿ ಕರೆದುಕೊಂಡು ಹೋದರೆ ಈ ದೇಶ ಒಗ್ಗಟ್ಟಾಗಿ ಉಳಿಯುತ್ತದೆ ಎಂದರು.