ಮೈಸೂರು : ನಮ್ಮ ದೇಶ ಭಾರತವು ಜಗತ್ತು ಕಂಡಂತಹ ಮಹಾನ್ ದೇಶವಾಗಿದ್ದು ಈ ನೆಲದಲ್ಲಿ ಬುದ್ಧನಂತಹ ಮಹನೀಯರು ಜನಿಸಿದ್ದಾರೆ. ಬುದ್ದ ಪ್ರಪಂಚದ ಶ್ರೇಷ್ಠ ಸಂತ. ಆತನ ಬೋಧನೆಗಳ ಕುರಿತು ವಿಶ್ವದ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಅವರು ” ಮನುಕುಲದ ಉದ್ಧಾರಕ್ಕೆ ವಿಜ್ಞಾನವು ಅಗತ್ಯವಾಗಿರುವ ಹಾಗೆ ಮನುಕುಲದ ಉದ್ಧಾರಕ್ಕೆ ಬುದ್ಧನ ಉಪದೇಶಗಳೂ ಕೂಡಾ ಅಷ್ಟೇ ಉಪಯುಕ್ತವಾಗಿವೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್. ಸಿ.ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
” ಮನುಕುಲದ ಉದ್ಧಾರಕ್ಕಾಗಿ ಬಂದ ಬುದ್ಧ ಸ್ವಾರ್ಥಿಯಾಗದೇ ಮನುಷ್ಯರೆಲ್ಲರೂ ಸಮಾನರು ಎಂದು ಹೇಳಿ ಜಗದ ಕಣ್ಣು ತೆರೆಸಿದಾತ. ಎಲ್ಲರೂ ಆತನನ್ನು ದೇವರೆಂದು ಕರೆದರೂ ಕೂಡಾ ಆ ಕೂಗನ್ನು ಬದಿಗೊತ್ತಿ ಬಹಳಷ್ಟು ಸರಳವಾಗಿ ಜೀವಿಸಿದ್ಧ ಮಹಾವ್ಯಕ್ತಿ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ” ಎಂದು ಮಹದೇವಪ್ಪ ಹೇಳಿದರು.
ಸ್ವತಃ ಗೌತಮ ಬುದ್ಧರೇ, ಎಷ್ಟೋ ಸಲ ಮಾತನಾಡುತ್ತಾ, ನಾನು ದೇವರೂ ಅಲ್ಲ, ದೇವದೂತನೂ ಅಲ್ಲ ಮಂತ್ರವಾದಿಯೂ ಅಲ್ಲ, ನಾನೂ ಕೂಡಾ ನಿಮ್ಮಂತೆಯೇ ಒಬ್ಬ ಮಹಾನ್ ವ್ಯಕ್ತಿ ಎಂದು ಹೇಳಿದ್ದರು. ಇದರ ಜೊತೆಗೆ ಬುದ್ಧನ ಬೋಧನೆಗಳೂ ಕೂಡಾ ಮೌಢ್ಯಕ್ಕೆ ವಿರುದ್ಧವಾಗಿ, ವೈಚಾರಿಕತೆಯ ಸಂದೇಶವನ್ನು ಸಾರುವಂತಹ ನಿಟ್ಟಿನಲ್ಲೇ ಸದಾ ಇವೆ ಎಂದು ಮಹದೇವಪ್ಪ ಹೇಳಿದರು. ” ಇಂತಹ ಬುದ್ಧ ಹುಟ್ಟಿದ ನಾಡಿನಲ್ಲಿ, ವಿಜ್ಞಾನ ತಂತ್ರಜ್ಞಾನವು ಇಷ್ಟೊಂದು ಮುಂದುವರೆದ ಕಾಲದಲ್ಲಿ ಪ್ರಧಾನಿ ಆಗಿರುವ ನರೇಂದ್ರ ಮೋದಿಯವರು ತಾನೊಬ್ಬ ದೇವದೂತ ಎಂದು ಬಹಿರಂಗವಾಗಿ ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ ” ಎಂದು ಸಚಿವರು ಲೇವಡಿ ಮಾಡಿದರು.