ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಕಾಲ್ ಶೀಟ್ ನೀಡುವುದಾಗಿ ಹೇಳಿ ಮುಂಗಡ ಹಣ ಪಡೆದು ಮೋಸ ಮಾಡಿದ್ದಾರೆ ಎಂಬ ನಿರ್ಮಾಪಕ ಎಂ. ಎನ್. ಕುಮಾರ್ ಹೇಳಿಕೆ ನೀಡಿದ್ದು ಈ ಬಗ್ಗೆ ಸುದೀಪ್ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಇದೀಗ ನಿರ್ಮಾಪಕ ಕುಮಾರ್ ಹೇಳಿಕೆಗೆ ನಿರ್ದೇಶಕ ನಂದಕಿಶೋರ್ ಪ್ರತಿಕ್ರಿಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗಷ್ಟೇ ಸುದೀಪ್ ನಟನೆಯ ಮುಂದಿನ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸುದೀಪ್ ನಟನೆಯ 46ನೇ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿದ್ದು ಚಿತ್ರದ ಶೂಟಿಂಗ್ ಆರಂಭಕ್ಕೂ ಮುನ್ನವೇ ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬೆನ್ನಲ್ಲೇ ನಿರ್ಮಾಪಕ ಕುಮಾರ್ ಹೇಳಿಕೆ ಸಾಕಷ್ಟು ಸುದ್ದಿಯಾಗಿದ್ದು ಈ ಕುರಿತು ನಿರ್ದೇಶಕ ನಂದ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ನಿರ್ಮಾಪಕ ಎನ್ ಕುಮಾರ್ 2016ರಲ್ಲಿ’ಮುಕುಂದ ಮುರಾರಿ’ ಸಿನಿಮಾ ನಂತರ ಸುದೀಪ್ ಜೊತೆ ಮತ್ತೊಂದು ಸಿನಿಮಾ ಒಪ್ಪಂದ ಮಾಡಿಕೊಂಡಿದ್ದರಂತೆ. ಅಲ್ಲದೆ ಸುಮಾರು 8 ವರ್ಷಗಳ ಹಿಂದೆ ಕಿಚ್ಚ ಸುದೀಪ್ಗೆ ಮುಂಗಡ ಹಣ ಪಾವತಿಸಿದ್ದರಂತೆ. ಆದ್ರೆ, ಅಲ್ಲಿಂದ ಇಲ್ಲಿವರೆಗೂ ಕಾಲ್ಶೀಟ್ ಕೊಡದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದ್ದರು.
ಇದೀಗ ಈ ಕುರಿತು ಯುಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ನಿರ್ದೇಶಕ ನಂದಕಿಶೋರ್ 56000 ರೂಪಾಯಿ ಹಣವನ್ನು ಚಿತ್ರಕ್ಕಾಗಿ ಅಡ್ವಾನ್ಸ್ ರೂಪದಲ್ಲಿ ನೀಡಿದ್ದಲ್ಲ, ಬದಲಾಗಿ ಕುಮಾರ್ ಅವರು ತಮಗೆ ವೈಯಕ್ತಿಕವಾಗಿ ನೀಡಿದ ದುಡ್ಡು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ನಟ, ಅವರಿಗೆ ಕೇವಲ 56000 ರೂ. ಮುಂಗಡ ಹಣ ಯಾವ ನಿರ್ಮಾಪಕರಾದ್ರೂ ನೀಡ್ತಾರಾ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.