ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಹಾಗೂ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕಾಲಿಸ್ ಅಭಿಪ್ರಾಯ ಪಟ್ಟಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಭಾರತದಲ್ಲಿ ಈವರೆಗೆ ಆಡಿರುವ ಪಂದ್ಯಗಳಲ್ಲಿ ಜೋಸ್ ಬಟ್ಲರ್ ಅಷ್ಟು ಸದ್ದು ಮಾಡಿಲ್ಲ. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾರೆ. ಐಪಿಎಲ್ 2022 ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ 863 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು.
“ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಜೋಸ್ ಬಟ್ಲರ್ ಗರಿಷ್ಠ ರನ್ ಸ್ಕೋರರ್ ಆಗಲಿದ್ದಾರೆ. ಇದು ಅಚ್ಚರಿಯ ಆಯ್ಕೆ ಆಗಿರಬಹದು. ಆದರೆ, ಖಂಡಿತಾ ಟೂರ್ನಿಯಲ್ಲಿ ಗರಿಷ್ಠ ರನ್ ಸ್ಕೋರರ್ ಅನಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ಬ್ಯಾಟರ್ ಆಗಿದ್ದಾರೆ. ಇಂಗ್ಲೆಂಡ್ ತಂಡ ಈ ಬಾರಿಯೂ ಫೈನಲ್ ತಲುಪುವಂತಹ ಆಟವಾಡಿದ್ದೇ ಆದರೆ, ಅದರ ಹಿಂದೆ ಜೋಸ್ ಬಟ್ಲರ್ ಬ್ಯಾಟಿಂಗ್ ಪ್ರದರ್ಶನ ಕಾಣಿಸಲಿದೆ,” ಎಂದು ಐಸಿಸಿಗೆ ನೀಡಿರುವ ವಿಶ್ವಕಪ್ ವಿಶೇಷ ಸಂದರ್ಶನದಲ್ಲಿ ಜಾಕ್ ಕಾಲಿಸ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಭಾರತದಲ್ಲಿ ಈವರೆಗೆ ಆಡಿರುವ 8 ಒಡಿಐ ಪಂದ್ಯಗಳಲ್ಲಿ ಬಟ್ಲರ್ ಕೇವಲ 83 ರನ್ ಮಾತ್ರವೇ ಗಳಿಸಿದ್ದಾರೆ. 11ರ ಸರಾಸರಿ ಹೊಂದಿರುವ ಬಟ್ಲರ್, ಈ ಬಾರಿ ತಮ್ಮ ಪ್ರದರ್ಶನ ಸುಧಾರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದ್ದಾರೆ. ಈ ಬಗ್ಗೆ ಮಾತಣಾಡಿರುವ ಜಾಕ್ ಕಾಲಿಸ್, ಇಂಗ್ಲೆಂಡ್ ಆಟಗಾರನ ಬ್ಯಾಟಿಂಗ್ ಸಾಮರ್ಥ್ಯವನ್ನು ಗುಣಗಾನ ಮಾಡಿದ್ದಾರೆ.