ಬಿಗ್ ಬಾಸ್ ಸೀಸನ್ 11ಗೆ ಎಂಟ್ರಿಕೊಟ್ಟಿದ್ದ ಲಾಯರ್ ಜಗದೀಶ್ ದೊಡ್ಮನೆಗೆ ಕಾಲಿಟ್ಟ ಎರಡೇ ವಾರಕ್ಕೆ ಹೊರ ಬಂದಿದ್ದರು. ಶೋ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂಬ ಕಾರಣದಿಂದ ಅವರನ್ನು ಮಧ್ಯದಲ್ಲೇ ಎಲಿಮಿನೇಟ್ ಮಾಡಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಜಗದೀಶ್ ಹವಾ ಕಡಿಮೆ ಆಗಿಲ್ಲ. ಎಂದಿನಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ರಿಯಾಲಿಟಿ ಶೋನಿಂದಲೂ ಅವರಿಗೆ ಅಹ್ವಾನ ಬರುತ್ತಿದೆ. ಈಗ ಅವರು ‘ಜೀ ಕನ್ನಡ’ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಿದ್ದಾರೆ.
ಜಗಮಗಿಸುವ ವೇದಿಕೆಯಲ್ಲಿ ಕಲರ್ಫುಲ್ ಬಟ್ಟೆ ಧರಿಸಿ ಜಗದೀಶ್ ಅವರು ಎಂಟ್ರಿ ನೀಡಿದ್ದಾರೆ. ಜೊತೆಗೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅವರ ಎಂಟ್ರಿ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಜಡ್ಜ್ಗಳಾದ ರಕ್ಷಿತಾ ಪ್ರೇಮ್, ಶಿವರಾಜ್ಕುಮಾರ್, ವಿಜಯ್ ರಾಘವೇಂದ್ರ ಅವರು ಗ್ರ್ಯಾಂಡ್ ವೆಲ್ ಕಮ್ ನೀಡಿದ್ದು, ಎಂದಿನಂತೆ ಜಗದೀಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.
‘ವೆಲ್ಕಮ್ ಜಗದೀಶ್. ಡ್ಯಾನ್ ಚೆನ್ನಾಗಿ ಮಾಡಿದ್ದೀರಿ’ ಎಂದು ಶಿವರಾಜ್ಕುಮಾರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರಿಂದ ಜಗದೀಶ್ ಅವರಿಗೆ ಸಖತ್ ಖುಷಿ ಆಗಿದೆ. ‘ನಮ್ಮಂಥವರ ಮುಂದೆ ನಿಂತಿರುವುದೇ ನಮ್ಮ ಅದೃಷ್ಟ’ ಎಂದು ಜಗದೀಶ್ ಹೇಳಿದ್ದಾರೆ. ‘ರಕ್ಷಿತಾ ಅವರನ್ನು ನೋಡಿ ಎಲ್ಲವನ್ನೂ ಮರೆತುಬಿಟ್ಟೆ. ಇವತ್ತು ನಾನು ಶಾರುಖ್ ಖಾನ್ ಆಗಿದ್ದೇನೆ’ ಎಂದು ಜಗದೀಶ್ ಹೇಳಿದ್ದಾರೆ.
‘ಜೀ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವೀಕೆಂಡ್ನಲ್ಲಿ ಜಗದೀಶ್ ಅವರ ಈ ಸಂಚಿಕೆ ಪ್ರಕಾರ ಆಗಲಿದೆ. ‘ಬಿಗ್ ಬಾಸ್ ಶೋನಿಂದ ಜಗದೀಶ್ ಎಲಿಮಿನೇಟ್ ಆದ ನಂತರ ನಾವು ಆ ಶೋ ನೋಡುತ್ತಿಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದರು. ಈಗ ಅವರು ‘ಡಿಕೆಡಿ’ ಕಾರ್ಯಕ್ರಮಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಫುಲ್ ಎಪಿಸೋಡ್ ನೋಡಲು ವೀಕ್ಷಕರು ಕಾದಿದ್ದಾರೆ. ಪ್ರೋಮೋದಲ್ಲಿ ಜಗದೀಶ್ ಅವರ ಡ್ಯಾನ್ಸ್ ನೋಡಿ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ.