ಬೆಂಗಳೂರು: ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇಂದು ರಾಜ್ಯದ ಆಡಳಿತಕ್ಕೆ ಬದಲಾವಣೆ ತಂದ ದಿನ. ಕಾಂಗ್ರೆಸ್ ಪಾಲಿಗೆ ಅತ್ಯಂತ ಪ್ರಮುಖ ದಿನ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಎ ಐ ಸಿ ಸಿ ಅಧ್ಯಕ್ಷರು ಮೊದಲ ಬಾರಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಇದೊಂದು ಪವಿತ್ರವಾದ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸಹ ಉಪಸ್ಥಿತರಿರುವುದು ವಿಶೇಷ. ರಾಜ್ಯದ ಹಾಗೂ ರಾಷ್ಟ್ರದ ಕಾಂಗ್ರೆಸ್ಸಿಗರ ನಿರೀಕ್ಷೆಗಳಿಗೆ ಬಂದಿದೆ ಅತ್ಯಂತ ಸಜ್ಜನ ರಾಜಕಾರಣಿ ಹಾಗೂ ಆರು ಬಾರಿ ಶಾಸಕರಾಗಿದ್ದ ಸೋಲಿಲ್ಲದ ಸರದಾರ ಸ್ವಾಭಿಮಾನಿ ರಾಜಕಾರಣಿ ಜಗದೀಶ್ ಶೆಟ್ಟರ್.
ಯಾವುದೇ ಕಳಂಕವಿಲ್ಲದೆ 40-45 ವರ್ಷ ರಾಜಕಾರಣ ಮಾಡಿಕೊಂಡು ಬಂದ ವ್ಯಕ್ತಿ. ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದು ಹಲವು ಹಂತದ ಅಧಿಕಾರವನ್ನು ಅನುಭವಿಸಿದ್ದರು. ಹಲವು ಹಂತದಲ್ಲಿ ಪಕ್ಷದ ಸಂಘಟನೆಗೆ ಶ್ರಮಿಸಿದ ಅವರು, ಪಕ್ಷಕ್ಕಾಗಿ ತಾವು ಅನುಭವಿಸಿದ ಹುದ್ದೆಯ ಸಂದರ್ಭ ಶ್ರಮಿಸಿದ್ದಾರೆ. ಇಂದು ಎಲ್ಲಾ ಕಾಂಗ್ರೆಸ್ಸಿಗರು ಹೆಮ್ಮೆಪಡುವ ರೀತಿ ಅಂತ ಮಹಾನ್ ನಾಯಕ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಅವರನ್ನು ನಾವು ಹೆಮ್ಮೆಯಿಂದ ಪಕ್ಷಕ್ಕೆ ಬರಮಾಡಿಕೊಳ್ಳಬೇಕು. ಇಂದು ಇವರ ಜೊತೆ ಸಂಸದರಾಗಿದ್ದ ಅಮರ್ ಸಿಂಗ್ ಪಾಟೀಲ್ ಸಹ ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ಅವರನ್ನು ಸಹ ಸ್ವಾಗತಿಸುತ್ತಿದ್ದೇವೆ. ಒಂದು ಶುಭದಿನ ಶುಭ ಗಳಿಗೆ ಶುಭ ಸಮಾರಂಭ ಇದು ಎಂದು ಬಣ್ಣಿಸಿದರು.