ಚಿಕ್ಕಬಳ್ಳಾಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ (Congress) ಪಕ್ಷ ಸೇರ್ಪಡೆಯಾಗಿರುವುದು ದುರದೃಷ್ಟಕರ. ಇದೊಂದು ಪೊಲಿಟಿಕಲ್ ಸೂಸೈಡ್ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ (Chikkaballapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರದತಲ್ಲಿ ಜಗದೀಶ್ ಶೆಟ್ಟರ್ ಜನಸಂಘದಿಂದ ಮೊದಲು ಚುನಾಯಿತರಾದವರು. ಅಂತಹ ನಾಯಕರು ಕಾಂಗ್ರೆಸ್ ಸೇರುತ್ತಿರುವುದು ದುರಾದೃಷ್ಟಕರ ವಿಷಯವಾಗಿದೆ. ಶೆಟ್ಟರ್ ವಿರೋಧ ಪಕ್ಷದ ನಾಯಕರಾದವರು. ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆದವರು. ಈಗ ಕೇವಲ ಶಾಸಕ ಸ್ಥಾನಕ್ಕಾಗಿ ಈ ರೀತಿ ಪಕ್ಷ ತೊರೆದು ಹೋಗಿದ್ದು ಸರಿಯಲ್ಲ. ರಾಜಕೀಯವಾಗಿ ಜಗದೀಶ್ ಶೆಟ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ಶೆಟ್ಟರ್ಗೆ ಸ್ಪರ್ಧೆ ಬೇಡ ಎಂದು ಹಿರಿಯ ನಾಯಕರು ಹೇಳಿದ್ದರು. ಅಷ್ಟಕ್ಕೆ ಪಕ್ಷ ಬಿಡುತ್ತಿರುವುದು ಸರಿಯಾದ ನಿರ್ಧಾರವಲ್ಲ. ಶೆಟ್ಟರ್ ಅವರದ್ದು ಸರಳ ಸಜ್ಜನ ವ್ಯಕ್ತಿತ್ವ ಅಂತವರು ಕಾಂಗ್ರೆಸ್ ಸೇರುವುದನ್ನು ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ಶೆಟ್ಟರ್ ಅವರ ರಕ್ತದ ಕಣ ಕಣದಲ್ಲೂ ಇದೆ ಎಂದು ನಾನು ಭಾವಿಸಿದ್ದೆ. ಆದರೆ ಶಾಸಕ ಸ್ಥಾನಕ್ಕಾಗಿ ಸಲೀಸಾಗಿ ಪಕ್ಷ ತೊರೆಯುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಲಿಂಗಾಯತರೇ. ಬಿಜೆಪಿ (BJP) ಲಿಂಗಾಯತ (Lingayats) ನಾಯಕರನ್ನ ತುಳಿಯುತ್ತಿಲ್ಲ. ಅವರವರ ಅರ್ಹತೆ ಅನುಭವ ಪಕ್ಷದ ಸಿದ್ಧಾಂತದ ಆಶಯಗಳಲ್ಲಿ ನಂಬಿಕೆ ಇರುವ ಜನಪ್ರಿಯ ನಾಯಕರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಯಾವ ಸಿದ್ಧಾಂತ ಹಾಗೂ ನಾಯಕತ್ವ ಇದೆ ಎಂದು ಶೆಟ್ಟರ್ ಅಲ್ಲಿಗೆ ಹೋಗಿದ್ದಾರೆ? ಇದನ್ನು ಅವರೇ ಹೇಳಬೇಕು. ಬಿಜೆಪಿಯಲ್ಲಿ ಇರಲು ಯೋಗ ಇರಬೇಕು ಎಂದು ಕುಟುಕಿದರು.